ರಾಜ್ಯದಲ್ಲಿ ನಕಲಿ ಬಿತ್ತನೆ ಬೀಜ ಹಾಗೂ ರಾಸಾಯನಿಕ ಗೊಬ್ಬರದ ಕೃತಕ ಅಭಾವ ಸೃಷ್ಟಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದೇವೆಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ. ಸದಾನಂದಗೌಡ ಅವರನ್ನು ಭೇಟಿ ಮಾಡಿ ತಿಳಿಸಿದ್ದಾರೆ. ದೆಹಲಿ ಪ್ರವಾಸದಲ್ಲಿರುವ ಬಿ.ಸಿ. ಪಾಟೀಲ್ ಅವರು, ಕೇಂದ್ರ ಸಚಿವರ ಜೊತೆಗೆ ರಾಜ್ಯದ ಕೃಷಿ ಚಟುವಟಿಕೆಗಳ ಕುರಿತು ಮಾಹಿತಿ ಹಂಚಿಕೊಂಡರು.
ರಾಜ್ಯದಲ್ಲಿ ಈ ಬಾರಿ ಉತ್ತಮ ಮಳೆಯಾಗಿದೆ. ಅಲ್ಲದೇ ಕೋವಿಡ್‌ನಿಂದಾಗಿ ಗ್ರಾಮೀಣ ಭಾಗದಲ್ಲಿ ಕೃಷಿಯೆಡೆಗೆ ರೈತಾಪಿವರ್ಗದ ಜೊತೆಗೆ ಯುವಜನತೆ ಕೃಷಿಗೆ ಹೆಚ್ಚು ಒತ್ತು ನೀಡಿರುವುದರಿಂದ ಈ ಬಾರಿ ಬಿತ್ತನೆಯೂ ಹೆಚ್ಚಾಗಿದೆ. ಆದ್ದರಿಂದ ಕೃಷಿಗೆ ಅಗತ್ಯವಾದ ರಸಗೊಬ್ಬರ ಹೆಚ್ಚಿನದಾಗಿ ಬಳಕೆಯಾಗುತ್ತಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ರೈತರಿಗೆ ಯಾವುದೇ ಕಾರಣಕ್ಕೂ ರಸಗೊಬ್ಬರದ ಕೊರತೆಯಾಗಲೀ, ಯೂರಿಯಾ ಗೊಬ್ಬರದ ಕೊರತೆಯಾಗಲೀ ಆಗದಂತೆ ಕ್ರಮ ಕೈಗೊಂಡಿದ್ದೇವೆಂದು ಬಿ.ಸಿ. ಪಾಟೀಲ್ ಮಾಹಿತಿ ನೀಡಿದರು.
ನಕಲಿ ಬೀಜ ತಡೆ, ನಕಲಿ ರಾಸಾಯನಿಕ ಗೊಬ್ಬರ ಅಕ್ರಮ ದಾಸ್ತಾನು ಜಾಲವನ್ನು ಬೇಧಿಸುವಲ್ಲಿ ಕೃಷಿ ಇಲಾಖೆ ಕೈಗೊಂಡ ಕ್ರಮಗಳ ಬಗ್ಗೆಯೂ ಕೇಂದ್ರ ಸಚಿವರಿಗೆ ಮಾಹಿತಿ ನೀಡಿದರು. ಇದೇ ಮೊದಲ ಬಾರಿಗೆ ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರ ರಾಜ್ಯದ ಅವಶ್ಯಕತೆಗಿಂತಲೂ ಹೆಚ್ಚಿನ ರಸಗೊಬ್ಬರವನ್ನು ಪೂರೈಸಿದ್ದು, ಮುಂದಿನ ದಿನಗಳಲ್ಲೂ ರಸಗೊಬ್ಬರದ ಕೊರತೆಯಾಗುವುದಿಲ್ಲ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಅವರು ಬಿ.ಸಿ. ಪಾಟೀಲ್ ಅವರಿಗೆ ಭರವಸೆ ನೀಡಿದರು.