ರಾಯಣ್ಣ- ಶಿವಾಜಿ ಪ್ರತಿಮೆಗಳಿಗೆ ಮಾಲಾರ್ಪಡೆ ಮಾಡಿದ ಸಚಿವರು, ವಿವಾದ ಸುಖಾಂತ್ಯ

0

ಬೆಳಗಾವಿ ಜಿಲ್ಲೆಯ ಪೀರನವಾಡಿಯಲ್ಲಿ ರಾಯಣ್ಣ ಪ್ರತಿಮೆ ವಿವಾದ ಸುಖಾಂತ್ಯವಾದ ಬೆನ್ನಲ್ಲೇ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯ್ತಿ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅವರು ಇಲ್ಲಿ ನೂತನವಾಗಿ ಪ್ರತಿಷ್ಠಾಪಿಷಲಾಗಿರುವ ಸಂಗೊಳ್ಳಿ ರಾಯಣ್ಣ ಮತ್ತು ಛತ್ರಪತಿ ಶಿವಾಜಿಮಹಾರಾಜರ ಪ್ರತಿಮೆಗಳಿಗೆ ಇಂದು ಮಾಲಾರ್ಪಣೆ ಮಾಡುವ ಮೂಲಕ ಪರಿಸ್ಥಿತಿಯನ್ನು ಮತ್ತಷ್ಟು ತಿಳಿಗೊಳಿಸಿದರು.

ಗಡಿ ಜಿಲ್ಲೆ ಬೆಳಗಾವಿಯ ಪೀರನವಾಡಿಯಲ್ಲಿ ಸ್ವಾತಂತ್ರ್ಯ ಸೇನಾನಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಠಾನಕ್ಕೆ ಆಗ್ರಹಿಸಿ ಕಳೆದ ಮೂರು ದಿನಗಳಿಂದ ಪ್ರತಿಭಟನೆ ಮತ್ತು ಸಂಘರ್ಷ ನಡೆದಿತ್ತು.

ನಿನ್ನೆಯಷ್ಟೇ ಜಿಲ್ಲಾ ಉಸ್ತುವಾರಿ ಸಚಿವರು, ಜನಪ್ರತಿನಿಗಳು, ಕನ್ನಡಪರ ಸಂಘಟನೆಗಳು, ಮರಾಠಿ ಸಂಘಟನೆಗಳು ಸೇರಿ ಮಹತ್ವದ ಮಾತುಕತೆ ನಡೆಸಿದ ನಂತರ ವಿವಾದ ಸುಖಾಂತ್ಯಗೊಂಡಿತ್ತು.

ಈ ಬೆನ್ನಲ್ಲೇ ಸಚಿವರಾದ ಈಶ್ವರಪ್ಪ, ರಮೇಶ್ ಜಾರಕಿಹೊಳಿ, ನಾಗೇಶ್ ಮತ್ತಿತರರು ಬೆಳಗಾವಿಯ ಪೀರನವಾಡಿಗೆ ತೆರಳಿ ಅಲ್ಲಿ ರಾಯಣ್ಣ ಮತ್ತು ಶಿವಾಜಿ ಮಹಾರಾಜರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿ ಏಕತೆಯನ್ನು ಸಾರಿದರು.

ಇದಕ್ಕೂ ಮುನ್ನ ಮಾತುಕತೆ ಫಲಪ್ರದವಾಗಿ ಯಾವುದೇ ಸಂಘರ್ಷ, ವಿವಾದಕ್ಕೆ ಎಡೆಮಾಡಿಕೊಡದಂತೆ ಪರಿಸ್ಥಿತಿಯನ್ನು ನಿಭಾಯಿಸಿದ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಅವರನ್ನ ಈಶ್ವರಪ್ಪ ಅವರು ಮನಸಾರೆ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಮತನಾಡಿದ ಈಶ್ವರಪ್ಪ, ಪರಿಸ್ಥಿತಿ ಇಷ್ಟು ಬೇಗ ತಿಳಿಗೊಳ್ಳುತ್ತದೆ ಎಂದು ಅನಿಸಿರಲಿಲ್ಲ. ಆದರೆ, ವಿವಾದ ಬೇಗ ಇತ್ಯರ್ಥವಾಗಿದೆ. ಇದರಿಂದ ನನಗೆ ಸಂತಸವಾಗಿದೆ. ಸಂಗೊಳ್ಳಿ ರಾಯಣ್ಣ, ಛತ್ರಪತಿ ಶಿವಾಜಿ ಮಹಾರಾಜ್ ಅವರಿಬ್ಬರೂ ದೇಶದ ಅಪ್ರತಿಮ ಹೋರಾಟಗಾರರು.

ಯಾವುದೋ ಕಾರಣಕ್ಕೆ ಸಣ್ಣಪುಟ್ಟ ಸಂಕುಚಿತ ಭಾವನೆಯಿಂದ ಬೇರೆ ಬೇರೆ ಎಂಬ ಸಂಘರ್ಷ ಉಂಟಾಗಿತ್ತು. ಈಗ ಅದು ಬಗೆಹರಿದಿರುವುದು ಎಲ್ಲಾ ರಾಷ್ಟ್ರಭಕ್ತರಿಗೂ ಆನಂದ ಉಂಟು ಮಾಡಿದೆ ಎಂದರು.

ಬೆಳಗಾವಿಯ ಪ್ರತಿಮೆ ವಿವಾದ ಸುಖಾಂತ್ಯಗೊಂಡಿರುವುದು ಮಾದರಿಯ ತೀರ್ಮಾನವಾಗಿದೆ. ಬೇರೆ ಬೇರೆ ರಾಜ್ಯಗಳಲ್ಲಿರುವ ಇಂತಹ ವಿವಾದಗಳು ಬಗೆಹರಿಯುವುದಕ್ಕೆ ಇದು ಆದರ್ಶವಾಗಿದೆ ಎಂದು ಈಶ್ವರಪ್ಪ ಅಭಿಪ್ರಾಯಪಟ್ಟರು.

ರಾಯಣ್ಣ, ಶಿವಾಜಿ ಮಹಾರಾಜರು ಯಾವ ಜಾತಿ, ಯಾವ ಭಾಷೆಯವರು, ಎಲ್ಲಿ ಹುಟ್ಟಿ ಬೆಳೆದವರು ಎಂಬ ಪ್ರಶ್ನೆ ಉದ್ಭವವಾಗುವುದಿಲ್ಲ. ಇವರು ದೇಶದಕ್ಕೆ ಸಲ್ಲಿಸಿದ ಸೇವೆ, ಹೋರಾಟಗಳು ನಮಗೆ ಆದರ್ಶವಾಗುತ್ತವೆ. ವಿವಾದ ಸುಖಾಂತ್ಯಗೊಂಡಿದೆ.

ನಿನ್ನೆ ರಾತ್ರಿ ಬೆಳಗಾವಿಯಲ್ಲಿ ಎಲ್ಲಾ ಜನಪ್ರತಿನಿಗಳು, ಸಂಘಟನೆಗಳವರು ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪನೆ, ಶಿವಾಜಿ ಮಹಾರಾಜ ವೃತ್ತ ಎಂದು ನಾಮಕರಣ ಮಾಡಲು ಒಕ್ಕೊರೊಲಿನ ತೀರ್ಮಾನಕ್ಕೆ ಬಂದಿರುವುದು ಅತ್ಯಂತ ಮಾದರಿಯ ತೀರ್ಮಾನಕವಾಗಿದೆ ಎಂದು ಪುನರುಚ್ಚರಿಸಿದರು.

ಇಡೀ ದೇಶ ಈ ತೀರ್ಮಾನವನ್ನು ಸ್ವಾಗತಿಸುತ್ತಿದೆ. ರಾಷ್ಟ್ರೀಯತೆ ನಿಟ್ಟಿನಲ್ಲಿ ಕೈಗೊಂಡಿರುವ ಮಹತ್ವದ ತೀರ್ಮಾನ ಇದಾಗಿದೆ ಎಂದು ನಾನು ಭಾವಿಸುತ್ತೇನೆ. ಪ್ರತಿಮೆ ವಿವಾದ ಸುಖಾಂತ್ಯಗೊಂಡಿದ್ದು, ಈ ಸಂದರ್ಭದಲ್ಲಿ ದಾಖಲಾಗಿರುವ ಎಲ್ಲ ಪ್ರಕರಣಗಳನ್ನು ವಾಪಸ್ ಪಡೆಯುವುದಾಗಿ ಈಗಾಗಲೇ ಗೃಹ ಸಚಿವರು ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದ್ದಾರೆ ಎಂದು ಈಶ್ವರಪ್ಪ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

LEAVE A REPLY

Please enter your comment!
Please enter your name here