ರಾಹುಲ್ ಅವರನ್ನು ಔಟ್ ಮಾ‌ಡಲು ಯೋಜನೆ ರೂಪಿಸಲಿದ್ದೇವೆ: ಶೇನ್ ಬಾಂಡ್

0

ಕಿಂಗ್ಸ್‌ ಇಲವೆನ್‌ ಪಂಜಾಬ್‌ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಮತ್ತು ನಾಯಕ ಕೆ.ಎಲ್‌.ರಾಹುಲ್‌ ಅವರ ವಿಕೆಟ್‌ ಕಬಳಿಸಲು ನಿರ್ದಿಷ್ಟ ಯೋಜನೆ ರೂಪಿಸಲಿದ್ದೇವೆ ಎಂದು ಮುಂಬೈ ಇಂಡಿಯನ್ಸ್‌ ತಂಡದ ಬೌಲಿಂಗ್ ಕೋಚ್‌ ಶೇನ್‌ ಬಾಂಡ್‌ ಹೇಳಿದ್ದಾರೆ.

ಈ ಬಾರಿಯ ಐಪಿಎಲ್‌ ಟೂರ್ನಿಯಲ್ಲಿ ಈವರೆಗೆ ಮೂರು ಪಂದ್ಯಗಳಲ್ಲಿ ಕಣಕ್ಕಿಳಿದಿರುವ ರಾಹುಲ್‌ 222 ರನ್‌ ಕಲೆಹಾಕಿದ್ದು, ಗರಿಷ್ಠ ರನ್ ಗಳಿಸಿದ ಆಟಗಾರ ಎನಿಸಿದ್ದಾರೆ. ಅವರು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಭರ್ಜರಿ ಶತಕ (132) ಸಿಡಿಸಿದ್ದರು.

ಮುಂಬೈ ಇಂಡಿಯನ್ಸ್‌ ತಂಡದ ವಿರುದ್ಧ ರಾಹುಲ್ ದಾಖಲೆ ಚೆನ್ನಾಗಿದೆ. 2018ರಿಂದ ಈಚೆಗೆ ಆಡಿರುವ 4 ಇನಿಂಗ್ಸ್‌ಗಳಲ್ಲಿ 1 ಶತಕ ಮತ್ತು 2 ಅರ್ಧಶತಕ ಸಿಡಿಸಿದ್ದಾರೆ. ಇದರೊಂದಿಗೆ ಅವರು 144.5ರ ಸರಾಸರಿಯಲ್ಲಿ ಬರೋಬ್ಬರಿ 289 ರನ್‌ ಗಳಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಬಾಂಡ್‌, ‘ಕೆ.ಎಲ್.‌ ರಾಹುಲ್‌ ಕಳೆದ ಕೆಲವು ಪಂದ್ಯಗಳಲ್ಲಿ ನಮ್ಮ ವಿರುದ್ಧ ರನ್‌ ಗಳಿಸಿದ್ದಾರೆ. ಆತ ಅದ್ಭುತ ಆಟಗಾರ. ಕೆಎಲ್ ಮೈದಾನದ ಸುತ್ತಲೂ ರನ್‌ ಗಳಿಸಬಲ್ಲ‌ ಚುರುಕಿನ ಆಟಗಾರ. ಹೀಗಾಗಿ ನಮ್ಮ ಬೌಲರ್‌ಗಳೊಂದಿಗೆ ತಂತ್ರ ರೂಪಿಸಲಿದ್ದೇವೆ. ರಾಹುಲ್‌ ಸಾಮಾನ್ಯವಾಗಿ ಆಟಕ್ಕೆ ಕುದುರಿಕೊಳ್ಳುತ್ತಾರೆ ಕೆಲ ಸಮಯ ತೆಗೆದುಕೊಳ್ಳುತ್ತಾರೆ. ಅದನ್ನು ಅವರು ಮತ್ತು ಅವರ ತಂಡದ ಬ್ಯಾಟ್ಸ್‌ಮನ್‌ಗಳ ಮೇಲೆ ಒತ್ತಡ ಹೇರಲು ಬಳಸಿಕೊಳ್ಳುತ್ತೇವೆ’ ಎಂದು ಹೇಳಿದ್ದಾರೆ.

‘ರಾಹುಲ್‌ ಅವರನ್ನು ಹೇಗೆ ಔಟ್‌ ಮಾಡಬಹುದು ಎಂಬುದಕ್ಕೆ ಸಂಬಂಧಿಸಿದಂತೆ ನಮಲ್ಲಿ ನಿರ್ದಿಷ್ಠ ತಂತ್ರಗಳಿವೆ. ಅವರು ಎಕ್ಸ್‌ಟ್ರಾ ಕವರ್, ಮತ್ತು ಫೈನ್‌-ಲೆಗ್‌ ವಿಭಾಗದಲ್ಲಿ ಬಲಿಷ್ಠರಾಗಿದ್ದಾರೆ. ಇಲ್ಲಿ ರನ್‌ಗಳಿಸಲು ಅವಕಾಶ ನೀಡುವುದಿಲ್ಲ. ರಾಹುಲ್ ಮೇಲೆ ಒತ್ತಡ ಹೇರಬಲ್ಲ ಉತ್ತಮ ಬೌಲಿಂಗ್‌ ವಿಭಾಗವಿದೆ ನಮ್ಮಲ್ಲಿದೆ’ ಎಂದಿದ್ದಾರೆ.

ನಾವು ಸ್ವಲ್ಪ ಒತ್ತಡ ಸೃಷ್ಟಿಸಿ ಇದುವರೆಗೆ ಅದ್ಭುತವಾಗಿ ಆಡಿರುವ ಆರಂಭಿಕರಿಬ್ಬರನ್ನು ಬೇಗನೆ ಔಟ್‌ ಮಾಡಿದರೆ ಮಧ್ಯಮ ಕ್ರಮಾಂಕದ ಮೇಲೆ ಒತ್ತಡ ಹೆಚ್ಚಾಗಲಿದೆ. ಇದರಿಂದಾಗಿ ಅವರು ಬೃಹತ್‌ ಮೊತ್ತ ಕಲೆಹಾಕದಂತೆ ಸುಲಭವಾಗಿ ತಡೆಯಬಹುದಾಗಿದೆ ಎಂದೂ ಹೇಳಿದ್ದಾರೆ.

ಪಂಜಾಬ್‌ ಮತ್ತು ಮುಂಬೈ ತಂಡಗಳು ಪಾಯಿಂಟ್ ಪಟ್ಟಿಯಲ್ಲಿ ಕ್ರಮವಾಗಿ 5 ಮತ್ತು 6ನೇ ಸ್ಥಾನಗಳಲ್ಲಿದ್ದು, ಈ ಆವೃತ್ತಿಯ 13ನೇ ಪಂದ್ಯದಲ್ಲಿ ಇಂದು ಸೆಣಸಾಟ ನಡೆಸಲಿವೆ.

LEAVE A REPLY

Please enter your comment!
Please enter your name here