ಉತ್ತರ ಪ್ರದೇಶದ ಹತ್ರಾಸ್‍ನಲ್ಲಿ ನಾಲ್ವರು ನೀಚರಿಂದ 19 ವರ್ಷದ ದಲಿತ ಯುವತಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಘಟನೆಯಿಂದ ದೇಶಾದ್ಯಂತ ವ್ಯಾಪಕ ಆಕ್ರೋಶ ಭುಗಿಲೆದ್ದಿರುವಾಗಲೇ ಅದೇ ರೀತಿಯ ಮತ್ತೊಂದು ಬರ್ಬರ ಕೃತ್ಯ ಬಲರಾಮ್‍ಪುರದಲ್ಲಿ ನಡೆದಿದೆ.
ಉತ್ತರ ಪ್ರದೇಶದಲ್ಲಿ ಅತ್ಯಾಚಾರ ಮತ್ತು ಮಹಿಳೆಯರ ಮೇಲಿನ ಹಿಂಸಾಚಾರ ಪ್ರಕರಣಗಳು ಮರುಕಳಿಸುತ್ತಿದ್ದು, ದೇಶದ ರೇಫ್ ಕ್ಯಾಪಿಟಲ್ ಎಂಬ ಕುಖ್ಯಾತಿ ಗಳಿಸುತ್ತಿದೆ.
ಹತ್ರಾಸ್‍ನಿಂದ ಸುಮಾರು 500 ಕಿ.ಮೀ. ದೂರದಲ್ಲಿರುವ ಬಲರಾಮ್‍ಪುರ್ ಗ್ರಾಮದಲ್ಲಿ ಕಾಮುಕರು 22 ವರ್ಷದ ದಲಿತ ಮಹಿಳೆಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಲೈಂಗಿಕ ಹಿಂಸೆ ಮತ್ತು ತೀವ್ರ ಹಲ್ಲೆಯಿಂದ ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ, ಮಾರ್ಗಮಧ್ಯೆದಲ್ಲೇ ಆಕೆ ಕೊನೆಯುಸಿರೆಳೆದರು.
ಈ ನೀಚ ಕೃತ್ಯದ ಸಂಬಂಧ ಈವರೆಗೆ ಮೂವರನ್ನು ಬಂಸಲಾಗಿದೆ. ಹತ್ರಾಸ್ ಗ್ಯಾಂಗ್‍ರೇಪ್-ಮರ್ಡರ್ ಕೃತ್ಯದ ಬೆನ್ನಲ್ಲೇ ಉತ್ತರಪ್ರದೇಶದಲ್ಲಿ ಅದೇ ರೀತಿಯ ಮತ್ತೊಂದು ಹೇಯ ಕೃತ್ಯ ನಡೆಸಿರುವುದು ದೇಶಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಹತ್ರಾಸ್‍ನಲ್ಲಿ ಸೆ.24ರಂದು ದಲಿತ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಮರಣಾಂತಿಕ ಹಲ್ಲೆ ನಡೆದಿತ್ತು. ನಂತರ ಆಕೆಯನ್ನು ಅಲಿಗಢದ ಎಎಂಯುನ ಜವಾಹರ್‍ಲಾಲ್ ನೆಹರು ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ಸೇರಿಸಲಾಗಿತ್ತು
ಸಾಮೂಹಿಕ ಅತ್ಯಾಚಾರದ ವೇಳೆ ದುಷ್ಕರ್ಮಿಗಳು ಆಕೆಯ ಉಸಿರುಗಟ್ಟಿಸಲು ಯತ್ನಿಸಿದ್ದರು. ಈ ಸಂದರ್ಭದಲ್ಲಿ ಯುವತಿಯು ನಾಲಿಗೆ ತುಂಡಾಗಿತ್ತು. ಶೋಚನೀಯ ಪರಿಸ್ಥಿತಿಯಲ್ಲಿದ್ದ ಆಕೆಯನ್ನು ನಂತರ ಆಸ್ಪತ್ರೆಗೆ ಸೇರಿಸಲಾಗಿತ್ತು.
ಈ ಪ್ರಕರಣದ ಸಂಬಂಧ ಎಲ್ಲ ನಾಲ್ವರು ಆರೋಪಿಗಳನ್ನು ಬಂಸಲಾಗಿದೆ. ಈ ಕೃತ್ಯವನ್ನು ಖಂಡಿಸಿ ಉತ್ತರ ಪ್ರದೇಶ ಮತ್ತು ದೆಹಲಿಗಳಲ್ಲಿ ಪ್ರತಿಭಟನೆ ನಡೆದಿದೆ.
ದಲಿತ ಮಹಿಳೆ ಅಪಹರಣ: ಹತ್ರಾಸ್‍ನಲ್ಲಿ ಯುವತಿ ಮೇಲೆ ಸಾಮೂಹಿತ ಅತ್ಯಾಚಾರ ಮತ್ತು ಕೊಲೆ ಘಟನೆಯಿಂದಾಗಿ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿರುವಾಗಲೇ ಇದೇ ಪ್ರದೇಶದಲ್ಲಿ ಟೆಂಪೋ ಚಾಲಕನೊಬ್ಬ ದಲಿತ ಮಹಿಳೆಯನ್ನು ಅಪಹರಿಸಿರುವ ಕೃತ್ಯವೂ ನಡೆದಿದೆ.
ಬಾಲಕಿ ಮೇಲೆ ಅತ್ಯಾಚಾರ: ಉತ್ತರ ಪ್ರದೇಶದ ಅಜಂಗಢ್‍ನಲ್ಲಿ 20 ವರ್ಷ ವ್ಯಕ್ತಿಯೊಬ್ಬರ ಪಕ್ಕದ ಮನೆಯ 8 ವರ್ಷ ಬಾಲಕಿ ಮೇಲೆ ಅತ್ಯಾಚಾರ ಎಸಗಿರುವ ನೀಚ ಕೃತ್ಯ ವರದಿಯಾಗಿದೆ. ತೀವ್ರ ರಕ್ತಸ್ರಾವಕ್ಕೆ ಒಳಗಾಗಿರುವ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಸ್ಥಿತಿ ಶೋಚನೀಯವಾಗಿದೆ.