ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಮೂರು ನೂತನ ಕೃಷಿ ಮಸೂದೆಗಳಿಗೆ ದೇಶದಾದ್ಯಂತ ರೈತರಿಂದ ವ್ಯಾಪಕ ವಿರೋಧ ವ್ಯಕ್ತವಾಗುತ್ತಿರುವ ಬೆನ್ನೆಲ್ಲೇ ರೈತರನ್ನು ಸಮಾಧಾನಪಡಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ‘ರೈತರ ಬೆಳೆಗಳಿಗೆ ಕೇಂದ್ರ ನಿಗದಿಪಡಿಸಿರುವ ಕನಿಷ್ಟ ಬೆಂಬಲ ಬೆಲೆಯನ್ನ ಏರಿಸಲು ಸಚಿವ ಸಂಪುಟ ಸಭೆಗೆ ಇಂದು ಅನುಮೋದನೆ ನೀಡಿದೆ.
ಸೋಮವಾರ ನಡೆಸಲಾಗಿರುವ ಕೇಂದ್ರ ಕ್ಯಾಬಿನೆಟ್ ಸಭೆಯಲ್ಲಿ 2021-22ರ ಋತುವಿನಲ್ಲಿ ಬೆಳೆಯಲಾದ ಗೋಧಿ, ಮಸೂರ, ಬಾರ್ಲಿ, ಸಾಸಿವೆ, ಕಾಬೂಲ್ ಕಡಲೆ ಸೇರಿದಂತೆ ಅನೇಕ ಬೆಳೆಗಳಿಗೆ ಬೆಂಬಲ ಬೆಲೆಯನ್ನು ಹೆಚ್ಚಿಸಲಾಗಿದೆ’.
ಹೌದು, ಕೇಂದ್ರ ಸರ್ಕಾರ ಗೋಧಿ ಸೇರಿದಂತೆ ಆರು ಹಿಂಗಾರು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಏರಿಕೆ ಮಾಡುವುದಾಗಿ ಸೋಮವಾರ ಘೋಷಿಸಿದ್ದು, ಇತ್ತೀಚಿನ ಬೆಳವಣಿಗೆಯಂತೆ ಗೋಧಿಯ ಬೆಂಬಲ ಬೆಲೆಯನ್ನು ಪ್ರತಿ ಕ್ವಿಂಟಾಲ್ ಗೆ 50 ರೂಪಾಯಿಗಳಿಂದ 1,975 ರೂ.ಗಳಿಗೆ ಹೆಚ್ಚಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ) ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಗೋಧಿ ಬೆಳೆಗೆ ಕನಿಷ್ಟ ಬೆಲೆಯನ್ನ ಪ್ರತಿ ಕ್ವಿಂಟಾಲ್ ಗೆ 1,975 ರೂ.ಗೆ ಏರಿಸಲಾಗುವುದು ಎಂದು ಘೋಷಿಸಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಗೋಧಿಗೆ ಕನಿಷ್ಠ ಬೆಂಬಲ ಬೆಲೆಯಲ್ಲಿ ಪ್ರತಿ ಕ್ವಿಂಟಾಲ್ ಗೆ 50 ರೂ.ಹೆಚ್ಚಳ ಮಾಡಿದರೆ ರೈತರಿಗೆ ಶೇ.106 ರಷ್ಟು ಲಾಭವಾಗಲಿದೆ ಎಂದಿದ್ದಾರೆ.
ಇನ್ನು ಈ ವಿಷಯವನ್ನ ಟ್ವೀಟ್ ಮೂಲಕ ತಿಳಿಸಿರುವ ಪ್ರಧಾನಿ ಮೋದಿ, ‘ಕೋಟ್ಯಂತರ ರೈತರಿಗೆ ಲಾಭವಾಗಲಿದೆ’, ಸರ್ಕಾರ ಗೋಧಿ, ಐದು ಹಿಂಗಾರು ಬೆಳೆಗಳ ಕನಿಷ್ಟ ಬೆಂಬಲ ಬೆಲೆಯನ್ನ ಹೆಚ್ಚಿಸಿದೆ ಎಂದಿದ್ದಾರೆ.