ಕೆಲದಿನಗಳ ಹಿಂದಷ್ಟೇ ಭಾರತೀಯ ವಾಯುಪಡೆಯ ಅಂಬಾಲಾ ವಾಯುನೆಲೆಗೆ ಬಂದಿಳಿದಿರುವ ರಣಧೀರ ರಫೇಲ್ ಯುದ್ಧವಿಮಾನಗಳು ಈಗಾಗಲೆ ಲಡಾಖ್ ಪ್ರದೇಶಗಳಲ್ಲಿ ರಾತ್ರಿ ವೇಳೆ ತಾಲೀಮು ನಡೆಸಲು ಆರಂಭಿಸಿವೆ. ಲಡಾಖ್ ಪೂರ್ವಭಾಗದಲ್ಲಿ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್ಎ) ಯೋಧರು ಅತಿಕ್ರಮಣ ಮಾಡಿರುವ ಹಿನ್ನೆಲೆಯಲ್ಲಿ ಆ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ತಲೆದೋರಿದೆ. ಈ ಪರಿಸ್ಥಿತಿಗೆ ಪೂರಕವಾಗಿ ಲಡಾಖ್ನ ಹಿಮಪರ್ವತಗಳ ನಡುವೆ ರಾತ್ರಿ ವೇಳೆ ಹಾರಾಟ ನಡೆಸುವ ತಾಲೀಮು ನಡೆಸುತ್ತಿರುವುದಾಗಿ ಭಾರತೀಯ ವಾಯುಪಡೆ ಮೂಲಗಳು ತಿಳಿಸಿವೆ.
ಒಂದು ವೇಳೆ ಪರಿಸ್ಥಿತಿ ಬಿಗಡಾಯಿಸಿದರೆ, ಗಗನದಿಂದ ಗಗನಕ್ಕೆ ಚಿಮ್ಮುವ ಮೀಟಿಯಾರ್ ಕ್ಷಿಪಣಿಗಳು ಹಾಗೂ ಗಗನದಿಂದ ಭೂಮಿಗೆ ಅಪ್ಪಳಿಸುವ SCALP ಕ್ಷಿಪಣಿಯನ್ನು ಉಡಾವಣೆ ಮಾಡಲು ಸನ್ನದ್ಧವಾಗಿರುವ ಸ್ಥಿತಿಯಲ್ಲಿ ರಫೇಲ್ ಯುದ್ಧವಿಮಾನಗಳ ತಾಲೀಮು ಸಾಗಿದೆ ಎನ್ನಲಾಗಿದೆ.
ಸದ್ಯಕ್ಕೆ ಈ ಯುದ್ಧವಿಮಾನಗಳು ವಾಸ್ತವ ಗಡಿರೇಖೆಯಿಂದ ಅನತಿ ದೂರದಲ್ಲಿ ಹಾರಾಟ ನಡೆಸುತ್ತಿವೆ. ಈ ಪ್ರದೇಶದಲ್ಲಿ ಪಿಎಲ್ಎ ರೇಡಾರ್ಗಳನ್ನು ಸ್ಥಾಪಿಸಿರುವುದರಿಂದ, ಇವುಗಳ ಫ್ರೀಕ್ವೆನ್ಸಿ ಸಿಗ್ನೇಚರ್ಗಳನ್ನು ಗ್ರಹಿಸಿ, ದಾಳಿ ಮಾಡುವ ಸಂದರ್ಭದಲ್ಲಿ ಅವನ್ನು ಜಾಮ್ ಮಾಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಈ ಮುನ್ನೆಚ್ಚರಿಕೆ ಕ್ರಮ ಅನುಸರಿಸಿರುವುದಾಗಿ ಸರ್ಕಾರದ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.
ರಫೇಲ್ ಯುದ್ಧವಿಮಾನಗಳಲ್ಲಿ ಪ್ರೋಗಾಮಬಲ್ ಸಿಗ್ನಲ್ ಪ್ರೊಸೆಸರ್ಗಳಿವೆ. ಹಾಗಾಗಿ ಅವುಗಳ ಸಿಗ್ನಲ್ ಫ್ರೀಕ್ವೆನ್ಸಿ ಬದಲಿಸಲು ಸಾಧ್ಯವಿದೆ. ಹಾಗಾಗಿ ಅವರನ್ನು ಲಡಾಖ್ ವಲಯದಲ್ಲಿ ತರಬೇತಿಗಾಗಿ ಬಳಸಲು ಯಾವುದೇ ಅಡ್ಡಿ ಇಲ್ಲ ಎಂದು ಮಿಲಿಟರಿ ವೈಮಾನಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಪಿಎಲ್ಎ ಯುದ್ಧವಿಮಾನ ಗುರುತಿಸುವ ರೇಡಾರ್ಗಳು ಅಮೆರಿಕದ ವಾಯುಪಡೆಯನ್ನು ಗಮನದಲ್ಲಿಟ್ಟುಕೊಂಡು ಸಿದ್ಧಪಡಿಸಲಾಗಿದೆ. ಅಲ್ಲದೆ, ರಫೇಲ್ ಯುದ್ಧವಿಮಾನಗಳ ಅಭ್ಯಾಸದ ವೇಳೆಯ ಸಿಗ್ನೇಚರ್ ಮತ್ತು ದಾಳಿ ಮಾಡುವ ಸಂದರ್ಭದಲ್ಲಿ ಸಿಗ್ನೇಚರ್ಗಳು ಭಿನ್ನವಾಗಿರುತ್ತವೆ. ಪಿಎಲ್ಎ ಯೋಧರು ಅಕ್ಸಾಯ್ ಚಿನ್ನಲ್ಲಿ ಇರಿಸಿರುವ ವಿದ್ಯುನ್ಮಾನ ಬೇಹುಗಾರಿಕಾ ರೇಡಾರ್ಗಳು ರಫೇಲ್ನ ಸಿಗ್ನಲ್ಗಳನ್ನು ಗ್ರಹಿಸಿದರೂ ಏನೂ ಸಮಸ್ಯೆಯಾಗುವುದಿಲ್ಲ ಎಂಬುದು ಇವರ ವಾದವಾಗಿದೆ.