ವಂದೇ ಭಾರತ್ ಮಿಷನ್ ಮೂಲಕ ಸ್ವದೇಶಕ್ಕೆ ಬಂದ 15 ಲಕ್ಷ ಭಾರತೀಯರು..!

0

ಕೊರೊನಾ ವೈರಸ್ ಪಿಡುಗಿನಿಂದ ವಿವಿಧ ದೇಶಗಳಲ್ಲಿ ಜಾರಿಯಲ್ಲಿದ್ದ ನಿರ್ಬಂಧಗಳಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ 15ಲಕ್ಷಕ್ಕೂ ಹೆಚ್ಚು ಭಾರತೀಯರನ್ನು ವಂದೇ ಭಾರತ್ ಮಿಷನ್ ಯೋಜನೆಯಡಿ ಸುರಕ್ಷಿತವಾಗಿ ಸ್ವದೇಶಕ್ಕೆ ಕರೆ ತರಲಾಗಿದೆ.

ಈ ವಿಷಯ ಕುರಿತು ಟ್ವೀಟ್ ಮಾಡಿರುವ ಕೇಂದ್ರ ನಾಗರಿಕ ವಿಮಾನಯಾನ ಖಾತೆಯ ಸಚಿವ ಹರ್‍ದೀಪ್ ಸಿಂಗ್ ಪುರಿ ಮೇ 6ರಿಂದ ಸೆ.5ರವರೆಗೆ ವಿವಿಧ ದೇಶಗಳಿಂದ 15 ಲಕ್ಷಕ್ಕೂ ಹೆಚ್ಚು ಭಾರತೀಯರನ್ನು ಸ್ವದೇಶಕ್ಕೆ ಕರೆ ತರಲಾಗಿದೆ ಎಂದು ಮಾಹಿತಿ ನೀಡಿದರು.

ಅಮೆರಿಕ , ಇಂಗ್ಲೆಂಡ್, ಫ್ರಾನ್ಸ್, ಜರ್ಮನಿ, ಕೊಲ್ಲಿ ರಾಷ್ಟ್ರಗಳು , ಆಫ್ರಿಕಾ ಖಂಡದ ದೇಶಗಳು ಸೇರಿದಂತೆ ವಿವಿಧ ರಾಷ್ಟ್ರಗಳಲ್ಲಿ ಕೋವಿಡ್-19 ಪಿಡುಗಿನಿಂದ ಲಕ್ಷಾಂತರ ಭಾರತೀಯರು ಸಂಕಷ್ಟಕ್ಕೆ ಸಿಲುಕಿದ್ದರು. ಇವರನ್ನು ಸ್ವದೇಶಕ್ಕೆ ಕರೆ ತರಲು ಮೇ 6ರಂದು ವಂದೇ ಭಾರತ್ ಮಿಷನ್ ಯೋಜನೆಯನ್ನು ಆರಂಭಿಸಲಾಗಿತ್ತು.

ಆಗಿನಿಂದ ನಿನ್ನೆಯವರೆಗೆ ಒಟ್ಟು 15 ಲಕ್ಷ ಭಾರತೀಯರನ್ನು ತಾಯ್ನಾಡಿಗೆ ಕರೆ ತರಲಾಗಿದೆ ಎಂದು ಸಚಿವರು ಹೇಳಿದ್ದಾರೆ. ಇದಕ್ಕಾಗಿ ಏರ್ ಇಂಡಿಯಾ ಸೇರಿದಂತೆ ವಿವಿಧ ಸಂಸ್ಥೆಗಳ ವಿಮಾನಗಳನ್ನು ಸೇನೆಗೆ ಬಳಸಿಕೊಳ್ಳಲಾಗಿತ್ತು. ಅನೇಕ ದೇಶಗಳಿಗೆ ತೆರಳಿದ್ದ ವಿಮಾನಗಳು ವಂದೇ ಭಾರತ್ ಮಿಷನ್ ಯೋಜನೆಯಡಿಯಲ್ಲಿ ಅತ್ಯಂತ ಸಮರ್ಪಕವಾಗಿ ಕಾರ್ಯ ನಿರ್ವಹಿಸಿವೆ.

ವಿಮಾನಯಾನ ಸಿಬ್ಬಂದಿ ಮತ್ತು ನಾಗರಿಕ ವಿಮಾನ ಯಾನ ಸಚಿವಾಲಯದ ಅಧಿಕಾರಿಗಳು ಉತ್ತಮ ರೀತಿಯಲ್ಲಿ ಸಹಕರಿಸಿ ಈ ಯೋಜನೆ ಯಶಸ್ವಿಯಾಗಲು ಸಹಕಾರ ನೀಡಿದ್ದಾರೆ ಎಂದು ಹರ್‍ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ. ಈ ಯೋಜನೆಯಡಿ ಹಡಗುಗಳ ಮೂಲಕವೂ ಕೆಲವು ದೇಶಗಳಿಂದ ಸಾವಿರಾರು ಭಾರತೀಯರನ್ನು ಸ್ವದೇಶಕ್ಕೆ ಕರೆ ತರಲಾಗಿದೆ.

LEAVE A REPLY

Please enter your comment!
Please enter your name here