ವಕೀಲರ ಕ್ಲರ್ಕ್​ಗಳಿಗೆ ಪ್ರತ್ಯೇಕ ಪರಿಹಾರ ಏಕೆ ನೀಡಿಲ್ಲ?: ಸರ್ಕಾರದ ಬಳಿ ಕಾರಣ ಕೇಳಿದ ಹೈಕೋರ್ಟ್

0

ಕೋವಿಡ್-19 ಹಿನ್ನೆಲೆಯಲ್ಲಿ ಕೋರ್ಟ್ ಕಲಾಪಗಳು ನಡೆಯದ ಪರಿಣಾಮ ಸಂಕಷ್ಟದಲ್ಲಿರುವ ವಕೀಲರ ಕ್ಲರ್ಕ್​ಗಳಿಗೆ ಪ್ರತ್ಯೇಕವಾಗಿ ಪರಿಹಾರ ನೀಡಲು ಸಾಧ್ಯವಾಗದಿರುವುದಕ್ಕೆ ಕಾರಣ ತಿಳಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ. ಕರ್ನಾಟಕ ರಾಜ್ಯ ವಕೀಲರ ಕ್ಲರ್ಕ್​ಗಳ ಸಂಘ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮಂಗಳವಾರ ವಿಚಾರಣೆ ನಡೆಸಿದ ಸಿಜೆ ಎ.ಎಸ್. ಓಕ್ ನೇತೃತ್ವದ ವಿಭಾಗೀಯ ಪೀಠ ಈ ಸೂಚನೆ ನೀಡಿತು.

ವಿಚಾರಣೆ ವೇಳೆ ಕರ್ನಾಟಕ ವಕೀಲರ ಪರಿಷತ್ ಪರ ವಕೀಲರು ವಾದ ಮಂಡಿಸಿ, ಸಂಕಷ್ಟದಲ್ಲಿರುವ ವಕೀಲರಿಗೆ ಆರ್ಥಿಕ ನೆರವು ಕಲ್ಪಿಸಲು ಸರ್ಕಾರ ಪರಿಷತ್​ಗೆ 5 ಕೋಟಿ ಅನುದಾನ ನೀಡಿದೆ. ಆ ಹಣ ವಕೀಲರಿಗೆ ವಿತರಿಸಲು ಕೋವಿಡ್-19 ವಕೀಲರ ಪರಿಹಾರ ನಿಧಿ ರೂಪಿಸಲಾಗಿದೆ. ಪರಿಹಾರಕ್ಕಾಗಿ ವಕೀಲರಿಂದ 4,300 ಅರ್ಜಿಗಳು ಬಂದಿದ್ದು, ಅವುಗಳನ್ನು ಪರಿಶೀಲಿಸಿ ಪರಿಹಾರ ವಿತರಿಸಲಾಗುವುದು ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಸರ್ಕಾರ ನೀಡಿದ 5 ಕೋಟಿ ಹಣದಲ್ಲಿಯೇ ವಕೀಲರ ಗುಮಾಸ್ತರಿಗೂ ಪರಿಹಾರ ಕಲ್ಪಿಸಲು ತಿಳಿಸಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಪರಿಷತ್​ಗೆ ಪತ್ರ ಬರೆದಿದ್ದಾರೆ. ಆದರೆ, ಆ ಹಣದಲ್ಲಿ ವಕೀಲರಿಗೆ ಹಾಗೂ ಗುಮಾಸ್ತರಿಗೆ ಎಷ್ಟು ಹಣ ಉಪಯೋಗಿಸಿಕೊಳ್ಳಬೇಕು ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಆ ಸ್ಪಷ್ಟತೆಯನ್ನು ಸರ್ಕಾರವೇ ನೀಡಬೇಕಾಗುತ್ತದೆ ಎಂದು ತಿಳಿಸಿದರು.

ನ್ಯಾಯಪೀಠ ಪ್ರತಿಕ್ರಿಯಿಸಿ, ಗುಮಾಸ್ತರಿಗೆ ಪ್ರತ್ಯೇಕವಾಗಿ ಪರಿಹಾರ ಕಲ್ಪಿಸಲು ಹೈಕೋರ್ಟ್ ಹೊರಡಿಸಿರುವ ಸೂಚನೆಗಳನ್ನು ಏಕೆ ಪಾಲಿಸಲು ಸಾಧ್ಯವಾಗುತ್ತಿಲ್ಲ ಎಂಬ ಬಗ್ಗೆ ಕಾರಣ ತಿಳಿಸುವಂತೆ ಸರ್ಕಾರಕ್ಕೆ ಸೂಚಿಸಿತು. ಜತೆಗೆ, ಕೋವಿಡ್-19 ವಕೀಲರ ಪರಿಹಾರ ನಿಧಿ ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿ ಒದಗಿಸುವಂತೆ ವಕೀಲರ ಪರಿಷತ್​ಗೆ ಸೂಚಿಸಿ ಸೆ.7ಕ್ಕೆ ವಿಚಾರಣೆ ಮುಂದೂಡಿತು.

LEAVE A REPLY

Please enter your comment!
Please enter your name here