ವಿಧಾನಸಭೆಯಲ್ಲಿ ಕೊರೋನಾ ಕಿತ್ತಾಟ : ಸುಧಾಕರ್ ಉತ್ತರಕ್ಕೆ ಕಾಂಗ್ರೆಸ್ ಗರಂ

0

ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಹಾಗೂ ಕಾಂಗ್ರೆಸ್ ಶಾಸಕರ ನಡುವೆ ವಿಧಾನಸಭೆಯಲ್ಲಿಂದು ಪದೇ ಪದೇ ವಾಕ್ಸಮರ ನಡೆಯಿತು. ನಿಯಮ69ರ ಅಡಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತಿತರರು ಪ್ರಸ್ತಾಪ ಮಾಡಿದ್ದ ಕೋವಿಡ್ ನಿರ್ವಹಣೆಯಲ್ಲಿ ಸರ್ಕಾರದ ವೈಫಲ್ಯ ಮತ್ತು ಆರೋಗ್ಯ ಸಂಬಂಧಿಸಿದ ಸಾಮಗ್ರಿಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಪ್ರಸ್ತಾಪಕ್ಕೆ ಸರ್ಕಾರದ ಪರವಾಗಿ ಸಚಿವರು ಉತ್ತರ ನೀಡುತ್ತಿದ್ದಾಗ ಪದೇ ಪದೇ ಕಾಂಗ್ರೆಸ್ ಮತ್ತು ಆಡಳಿತ ಪಕ್ಷದ ಶಾಸಕರ ನಡುವೆ ಮಾತಿನ ಚಕಮಕಿ ನಡೆದು ಗದ್ದ, ಗೊಂದಲದ ವಾತಾವರಣ ಉಂಟಾಯಿತು.

ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್, ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ಸವಿಸ್ತಾರವಾಗಿ ಉತ್ತರ ನೀಡುತ್ತಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ಸದಸ್ಯರು ಪ್ರತಿಯಾಗಿ ಮಾತನಾಡಲು ಮುಂದಾದ್ದರಿಂದ ಆಡಳಿತ ಮತ್ತು ಕಾಂಗ್ರೆಸ್ ಸದಸ್ಯರ ನಡುವೆ ವಾಗ್ವಾದ ನಡೆಯಿತು.

ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಅವರು ಮಾತನಾಡಿ, ಮಾ.28ರಂದು ಮುಖ್ಯಮಂತ್ರಿಯವರಿಗೆ ಪತ್ರ ಬರೆದು ಸುತ್ತಮುತ್ತಲಿನ ರಾಜ್ಯಗಳಲ್ಲಿ ನೆಲೆಸಿರುವ ಕನ್ನಡಿಗರು ರಾಜ್ಯಕ್ಕೆ ಮರಳಲು ಅವಕಾಶಮಾಡಿಕೊಡಬೇಕು. ರೋಗ ಹರಡದಂತೆ ಅವರನ್ನು ಗಡಿಯಲ್ಲೇ ಕ್ವಾರಂಟೈನ್ ಮಾಡಬೇಕೆಂದು ಪತ್ರದಲ್ಲಿ ಕೋರಲಾಗಿತ್ತು. ಸರ್ವಪಕ್ಷಗಳ ಸಭೆಯಲ್ಲೂ ನಮ್ಮ ಪಕ್ಷ ಪ್ರಸ್ತಾಪ ಮಾಡಿತ್ತು. ಆದರೆ, ಲಾಕ್‍ಡೌನ್ ಸಡಿಲ ಮಾಡಿದ ಸಂದರ್ಭದಲ್ಲಿ ಕಲಬುರ್ಗಿಗೆ ಎರಡು ಲಕ್ಷ ಮಂದಿ ಬಂದರು. ಇದರಿಂದ ಕೋವಿಡ್ ಹರಡುವಿಕೆ ಹೆಚ್ಚಾಯಿತು ಎಂದರು.

ಅದಕ್ಕೆ ಪ್ರತಿಯಾಗಿ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಅವರು, ಲಾಕ್‍ಡೌನ್ ಸಂದರ್ಭದಲ್ಲಿ ಜೀವ ಉಳಿಸುವ ಕೆಲಸವನ್ನು ಸರ್ಕಾರ ಮಾಡಿತ್ತು. ಜನ ಜೀವನ ಸಹಜ ಸ್ಥಿತಿಗೆ ಮರಳಲಿ ಎಂಬ ಕಾರಣಕ್ಕೆ ಲಾಕ್‍ಡೌನ್ ಸಡಿಲಮಾಡಲಾಯಿತು. ಜೂನ್‍ವರೆಗೆ ಕೇವಲ 15 ಸಾವಿರ ಕೋವಿಡ್ ಪ್ರಕರಣಗಳಿದ್ದವು. ಆನಂತರ ಹೆಚ್ಚಾಯಿತು ಎಂದು ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಳ್ಳುವ ಪ್ರಯತ್ನ ಮಾಡಿದರು.

ಉತ್ತರ ಕೊಡುವಾಗ ಪದೇ ಪದೇ ಆಕ್ಷೇಪವನ್ನು ಕಾಂಗ್ರೆಸ್ ಸದಸ್ಯರು ಮಾಡಿದರು. ಸಭಾಧ್ಯಕ್ಷರು ಮಧ್ಯ ಪ್ರವೇಶಿಸಿ, ಈ ರೀತಿ ಮಾತನಾಡಿದರೆ ಸದನಕ್ಕೆ ಗೌರವ ಬರುವುದಿಲ್ಲ. ಉತ್ತರ ನೀಡಲು ಸಹಕರಿಸಿ ಎಂದು ಹೇಳಿದಾಗ ಪರಿಸ್ಥಿತಿ ಹತೋಟಿಗೆ ಬಂದಿತು.

LEAVE A REPLY

Please enter your comment!
Please enter your name here