ವಿಪತ್ತು ನಿರ್ವಹಣೆಯಲ್ಲಿ ನಾಯಕತ್ವದ ಪಾತ್ರ ಮಹತ್ವದ್ದು : ಭಾಸ್ಕರ್ ರಾವ್

0

ಸೆ.4- ಕೊರೊನಾ ಸಾಂಕ್ರಾಮಿಕ ಸಂದರ್ಭದಲ್ಲಿ ಕೆಲವು ಅನಾನುಕೂಲತೆ ನಡುವೆಯೂ ನಮ್ಮಲ್ಲಿ ನಾಯಕತ್ವ ಗುಣಗಳು ಬೆಳೆದಿದ್ದು, ಇದು ಸಮಾಜದಲ್ಲಿ ಸಕಾರಾತ್ಮಕ ಪರಿವರ್ತೆನೆಗೆ ಕಾರಣವಾಗಿದೆ ಎಂದು ರಾಜ್ಯ ಸರ್ಕಾರದ ಆಂತರಿಕ ಭದ್ರತೆಯ ಎಡಿಜಿಪಿ ಭಾಸ್ಕರ್ ರಾವ್ ಹೇಳಿದ್ದಾರೆ.

ಆರ್‍ಟಿ ನಗರದ ದಿಣ್ಣೂರು ಮುಖ್ಯರಸ್ತೆಯಲ್ಲಿರುವ ಲಾಲ್ ಬಹದ್ದೂರು ಶಾಸ್ತ್ರಿ ಸರ್ಕಾರಿ ಪ್ರಥಮ ದರ್ಜೆ ಸರ್ಕಾರಿ ಕಾಲೇಜು ವತಿಯಿಂದ ಮೂರು ದಿನಗಳ ಕಾಲ ಏರ್ಪಡಿಸಿರುವ ವೆಬಿನಾರ್ ಉದ್ದೇಶಿಸಿ ಅವರು ಮಾತನಾಡಿದರು.

ವಿಪತ್ತು ನಿರ್ವಹಣೆಯಲ್ಲಿ ನಾಯಕತ್ವದ ಪಾತ್ರ ಎಂಬ ವಿಷಯದ ಕುರಿತು ಮಾತನಾಡಿದ ಭಾಸ್ಕರ್ ರಾವ್, ಪ್ರತಿಯೊಬ್ಬರಲ್ಲೂ ನಾಯಕತ್ವದ ಗುಣ ಇರುತ್ತದೆ. ಅವುಗಳು ಸಂದರ್ಭಾನುಸಾರ, ಅನಿವಾರ್ಯತೆಗಳ ಸಂದರ್ಭಗಳಲ್ಲಿ ಹೊರಹೊಮ್ಮುತ್ತವೆ. ಕೊರೊನಾ ಸಂದರ್ಭದಲ್ಲಿಯೂ ಸಮಾಜದ ಹಲವರು ಮುಂದೆ ಬಂದು ಸಂಕಷ್ಟದಲ್ಲಿರುವವರಿಗೆ ನೆರವಾಗಿದ್ದು, ಇದು ನಾಯಕತ್ವ ಗುಣಕ್ಕೆ ಉತ್ತಮ ನಿರ್ದಶನವಾಗಿದೆ ಎಂದು ಅವರು ತಿಳಿಸಿದರು.

ಸಾಮಾಜಿಕ ಮಾಧ್ಯಮ ಇತರೆಲ್ಲಾ ಮಾಧ್ಯಮಗಳಿಗಿಂತಲೂ ಈಗ ಹೆಚ್ಚು ಪ್ರಭಾವಶಾಲಿಯಾಗಿದೆ. ಆದರೆ ಇವುಗಳನ್ನು ಸಾಕಾರಾತ್ಮಕವಾಗಿ ಉಪಯೋಗಿಸಬೇಕೇ ಹೊರತು ಸಮಾಜದ ಸ್ವಾಸ್ಥ್ಯ ಕೆಡಿಸಲು ಬಳಸಬಾರದು. ಅದರಲ್ಲಿ ಬರುವ ವಿಷಯಗಳನ್ನು ಏಕಾಏಕಿ ನಂಬಬಾರದು. ಅದನ್ನು ಪರಾಮರ್ಶೆಗೆ ಒಳಪಡಿಸಿ, ಸತ್ಯವನ್ನು ಮಾತ್ರ ನಂಬಬೇಕು ಎಂದು ಕರೆ ನೀಡಿದ ಅವರು, ಪ್ರವಾಹ, ಬಿರುಗಾಳಿ, ಭೂಕಂಪ ಮುಂತಾದ ವಿಪತ್ತು ಸಂದರ್ಭದಲ್ಲಿ ನಾಯಕತ್ವ ಗುಣ ಪ್ರದರ್ಶಿಸಬೇಕು.

ಕೊರೊನಾ ಸಂದರ್ಭದಲ್ಲಿ ಹಲವರು ಪ್ರಾಣದ ಹಂಗು ತೊರೆದು ನಾಯಕತ್ವ ಗುಣ ಪ್ರದರ್ಶಿಸಿದ್ದರಿಂದ ಹಲವರ ಪ್ರಾಣ ರಕ್ಷಣೆಯಾಗಿದೆ ಎಂದರು. ಸಮಾಜದಲ್ಲಿ ಪರಸ್ಪರ ಪ್ರೀತಿ, ವಿಶ್ವಾಸದಿಂದ ಬದುಕುವುದು ಮಾನವನ ಕರ್ತವ್ಯವಾಗಿದೆ. ಇವುಗಳು ನಷ್ಟವಾದರೆ ಸಮಾಜದಲ್ಲಿ ಅಶಾಂತಿ ನಿರ್ಮಾಣವಾಗುತ್ತದೆ. ನಾವೆಲ್ಲರೂ ಮನುಷ್ಯರು ನಮ್ಮ ನಡುವೆ ಯಾವುದೇ ಭೇದ-ಭಾವ ಇರಬಾರದು. ಆಗ ಮಾತ್ರ ಶಾಂತಿ ಯುತ ಸಮಾಜ ನಿರ್ಮಾಣ ಸಾಧ್ಯ ಎಂದರು.

ಪ್ರಾಂಶುಪಾಲರಾದ ಡಾ.ವನಿತಾ ಕೆ.ಗಡ್, ಪ್ರೊ.ಬಾನುಮತಿ, ಅರ್ಥಶಾಸ್ತ್ರ ವಿಭಾಗದ ಎಚ್.ಪಿ ಪೂರ್ಣಿಮಾ, ಮತ್ತಿತರರು ಭಾಗವಹಿಸಿದ್ದರು. ಕಾಲೇಜಿನ ಭಾಷಾ ಸಂಗಮದ ಅಧ್ಯಕ್ಷ ಪ್ರೊ.ಮುಹಮ್ಮದ್ ಮನ್ಸೂರ್ ನುಹ್‍ಮಾನ್ ವಂದಿಸಿದರು. ವೆಬಿನಾರ್‍ನಲ್ಲಿ ಪ್ರೊ.ಶ್ರೀಧರ ಮೂರ್ತಿ, ಜೈನ್ ಕಾಲೇಜಿನ ಕುಲಪತಿ ಡಾ.ಸಂದೀಪ್ ಶಾಸ್ತ್ರಿ, ಸುವರ್ಣ ಕಾಲೇಜಿನ ಪ್ರಾಂಶುಪಾಲರಾದ ಡಾ.ಭವಾನಿ ಎಂ.ಆರ್. ಪತ್ರಕರ್ತ ಅಬ್ದುಲ್ ರೆಹಮಾನ್ ಮುಸವ್ವಿರ್ ಮಾತನಾಡಲಿದ್ದಾರೆ.

LEAVE A REPLY

Please enter your comment!
Please enter your name here