ವೈಮಾನಿಕ ತಿದ್ದುಪಡಿ ಮಸೂದೆಗೆ ಸಂಸತ್ತಿನ ಅನುಮೋದನೆ

0

ಭಾರತದ ವಾಯುಯಾನ ಸುರಕ್ಷತಾ ಶ್ರೇಯಾಂಕವನ್ನು ಸುಧಾರಿಸುವ ಮತ್ತು ವಾಯುಯಾನ ನಿಯಂತ್ರಕ ಸಂಸ್ಥೆಗಳಿಗೆ ಶಾಸನಬದ್ಧ ಸ್ಥಾನಮಾನ ಕಲ್ಪಿಸುವ ಉದ್ದೇಶದ ವೈಮಾನಿಕ ತಿದ್ದುಪಡಿ ಮಸೂದೆ 2020ಕ್ಕೆ ಸುಮಾರು ಒಂದು ಗಂಟೆಯ ಚರ್ಚೆ ಬಳಿಕ ರಾಜ್ಯಸಭೆ ಅನುಮೋದನೆ ನೀಡಿದೆ. ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಮಂಗಳವಾರ ಮಂಡಿಸಿದ ಈ ಮಸೂದೆಗೆ ಮಾರ್ಚ್‌ನಲ್ಲಿ ಮಸೂದೆಗೆ ಲೋಕಸಭೆಯ ಅನುಮೋದನೆ ದೊರಕಿತ್ತು.

ನಾಗರಿಕ ವಿಮಾನಯಾನ ನಿರ್ದೇಶನಾಲಯ(ಡಿಜಿಸಿಎ), ಬ್ಯೂರೊ ಆಫ್ ಸಿವಿಲ್ ಏವಿಯೇಷನ್ ಸೆಕ್ಯುರಿಟಿ(ಬಿಸಿಎಎಸ್) ಮತ್ತು ಏರ್‌ಕ್ರಾಫ್ಟ್ ಆಯಕ್ಸಿಡೆಂಟ್ ಇನ್‌ವೆಸ್ಟಿಗೇಷನ್ ಬ್ಯೂರೊ(ಎಎಐಬಿ)ಗಳನ್ನು ಶಾಸನಬದ್ಧ ಸಂಸ್ಥೆಗಳನ್ನಾಗಿ ಪರಿವರ್ತಿಸುವ ಉದ್ದೇಶದ ಮಸೂದೆ ಇದಾಗಿದೆ. ಹೊಸ ಮಸೂದೆ ಜಾರಿಗೊಂಡ ಬಳಿಕ ಅದನ್ನು ಉಲ್ಲಂಘಿಸುವವರಿಗೆ 2 ವರ್ಷದ ಜೈಲುಶಿಕ್ಷೆ ಅಥವಾ 10 ಲಕ್ಷ ರೂ. ದಂಡ, ಅಥವಾ ಎರಡನ್ನೂ ಒಟ್ಟಿಗೇ ವಿಧಿಸಬಹುದಾಗಿದೆ. ಶಸ್ತ್ರಾಸ್ತ್ರ, ಸ್ಫೋಟಕ ವಸ್ತುಗಳನ್ನು ವಿಮಾನದೊಳಗೆ ಕೊಂಡೊಯ್ಯುವುದು, ವಿಮಾನ ನಿಲ್ದಾಣದ ಸುತ್ತ ಅಕ್ರಮ ನಿರ್ಮಾಣ ಕಾಮಗಾರಿಗೆ 10 ಲಕ್ಷದಿಂದ 1 ಕೋಟಿ ರೂ.ವರೆಗೆ ದಂಡ ವಿಧಿಸಲಾಗುವುದು. ವಾಯುಯಾನ ಕ್ಷೇತ್ರದಲ್ಲಿ ಅಮೆರಿಕ ಮತ್ತು ಚೀನಾದ ಬಳಿಕ ಭಾರತ ವಿಶ್ವದಲ್ಲಿ ಅತೀ ದೊಡ್ಡ ಮಾರುಕಟ್ಟೆಯಾಗಿದೆ. 2008-09ರಿಂದ 2013-14ರವರೆಗಿನ ಐದು ವರ್ಷದಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ 9% ಹೆಚ್ಚಳವಾಗಿದ್ದರೆ 2014-15ರಿಂದ 2018-20ರವರೆಗಿನ ಅವಧಿಯಲ್ಲಿ 12.4% ಹೆಚ್ಚಳವಾಗಿದೆ.

ಈಗ ಭಾರತದ ವಾಯುಕ್ಷೇತ್ರದಲ್ಲಿ 661 ವಿಮಾನಗಳು ಕಾರ್ಯನಿರ್ವಹಿಸುತ್ತಿದ್ದು ಮುಂದಿನ 5 ವರ್ಷಗಳಲ್ಲಿ 1,200 ಹೆಚ್ಚುವರಿ ವಿಮಾನಗಳು ಕಾರ್ಯನಿರ್ವಹಿಸಲಿವೆ ಎಂದು ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಮಾಹಿತಿ ನೀಡಿದರು.

ವಿಪಕ್ಷಗಳು ಮಸೂದೆಯನ್ನು ವಿರೋಧಿಸಿವೆ. ವಾಯುಯಾನ ಉದ್ಯಮದಲ್ಲಿ ಹಲವು ಹುದ್ದೆಗಳನ್ನು ಭರ್ತಿ ಮಾಡಬೇಕಿದೆ. ವಾಯುಸಂಚಾರ ನಿಯಂತ್ರಣ ಸಿಬಂದಿಗಳ ಹುದ್ದೆಯೂ ಖಾಲಿಯಿದ್ದು ಇವುಗಳನ್ನು ಭರ್ತಿ ಮಾಡಲು ಸರಕಾರ ಮುಂದಾಗಬೇಕು ಎಂದು ಕಾಂಗ್ರೆಸ್‌ನ ರಾಜ್ಯಸಭಾ ಸಂಸದ ಕೆಸಿ ವೇಣುಗೋಪಾಲ್ ಹೇಳಿದರು. ಏರ್‌ಇಂಡಿಯಾದಿಂದ ಹೂಡಿಕೆ ಹಿಂದೆಗೆದುಕೊಳ್ಳುವ ಸರಕಾರದ ನಿರ್ಧಾರಕ್ಕೂ ವಿಪಕ್ಷಗಳು ಅಸಮಾಧಾನ ಸೂಚಿಸಿವೆ

LEAVE A REPLY

Please enter your comment!
Please enter your name here