ಕಳೆದ ಏಪ್ರಿಲ್ ತಿಂಗಳಲ್ಲಿ ಬಾಂಬೆ ಮುನ್ಸಿಪಲ್ ಕಾರ್ಪೋರೆಷನ್ಗೆ ಕರೊನಾ ಸೋಂಕಿತರ ಚಿಕಿತ್ಸೆಗೆಂದು ಬಂಗಲೆಯೊಂದನ್ನು ನೀಡಿದ್ದ ಶಾರುಖ್ ಖಾನ್, ಇದೀಗ ಅದಕ್ಕಿಂತ ಒಂದು ಹೆಜ್ಜೆ ಮುಂದಿಟ್ಟಿದ್ದಾರೆ. ಅಂದರೆ, ಅದೇ ಬಂಗಲೆಯಲ್ಲಿ ಐಸಿಯು ತೆರೆಯಲು ಸೂಚಿಸಿದ್ದು, ಈಗಾಗಲೇ ಸೋಂಕಿತರಿಗೆ ಚಿಕಿತ್ಸೆ ನೀಡುವ ಕಾರ್ಯವೂ ಶುರುವಾಗಿದೆ. ಶಾರುಖ್ ಅವರ ಈ ನಡೆಗೆ ಬಿಎಂಸಿ ಧನ್ಯವಾದ ತಿಳಿಸಿದೆ.
ಕರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾದಾಗಿನ ಸಂದರ್ಭದಲ್ಲಿ ಇಡೀ ಬಂಗಲೆಯಲ್ಲಿ 66ಕ್ಕೂ ಅಧಿಕ ಕರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲಾಗಿತ್ತು. ಅದಾದ ಕೆಲ ದಿನಗಳ ಬಳಿಕ ಅದರಲ್ಲಿ 54 ಜನರು ಸೋಂಕು ಮುಕ್ತಗೊಂಡು ಮನೆಯತ್ತ ನಿರ್ಗಮಿಸಿದ್ದರು. ಇನ್ನುಳಿದ 12 ಜನರಿಗೆ ಅಲ್ಲಿಯೇ ಐಸಿಯು ವ್ಯವಸ್ಥೆ ಕಲ್ಪಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಅಂದಹಾಗೆ, ಜುಲೈ ತಿಂಗಳಲ್ಲಿಯೇ ಕೋಣೆಗಳನ್ನು ಐಸಿಯು ವಾರ್ಡ್ಗಳಾಗಿ ಮಾಡುವ ಕಾರ್ಯ ಚಾಲ್ತಿಯಲ್ಲಿತ್ತು. ಇದೀಗ ಬಹುತೇಕ ಆ ಕೆಲಸ ಮುಕ್ತಾಯವಾಗಿದ್ದು, ರೋಗಿಗಳನ್ನು ಅಲ್ಲಿನ ಐಸಿಯು ವಾರ್ಡ್ಗಳಿಗೆ ಶಿಪ್ಟ್ ಮಾಡಲಾಗುತ್ತಿದೆ. ಅಚ್ಚರಿ ವಿಚಾರ ಏನೆಂದರೆ, ಶಾರುಖ್ ಖಾನ್ ಕೇವಲ ಬಂಗಲೆ ನೀಡುವುದಷ್ಟೇ ಅಲ್ಲದೆ, ಐಸಿಯು ವಾರ್ಡ್ ನಿರ್ಮಾಣಕ್ಕೆ ಬೇಕಾದ ಮೊತ್ತವನ್ನೂ ತಮ್ಮ ಒಡೆತನದ ಮೀರ್ ಫೌಂಡೇಷನ್ನಿಂದ ನೀಡುತ್ತಿದ್ದಾರೆ. (ಏಜೆನ್ಸೀಸ್)