ಶಾಲಾ- ಕಾಲೇಜು ಮತ್ತೆ ಬಂದ್​; ಫ್ಯಾನ್​ ಬಳಕೆಗೂ ನಿರ್ಬಂಧ ವಿಧಿಸಿದೆ ಈ ದೇಶ.!

0

ಆರ್ಥಿಕ ಚಟುವಟಿಕೆಗಳ ಪುನಾರಂಭಕ್ಕೆ ಅವಕಾಶ ನೀಡಲಾಗಿದ್ದರೂ, ಶಾಲಾ- ಕಾಲೇಜು ಆರಂಭಕ್ಕೆ ದೇಶದಲ್ಲಿ ಸದ್ಯಕ್ಕಂತೂ ಅವಕಾಶವಿಲ್ಲ ಎನ್ನುವುದು ಬಹುತೇಕ ಖಚಿತವಾಗಿದೆ. ಆದರೆ, ಕರೊನಾ ಕೇಸ್​​ಗಳು ಗಣನೀಯವಾಗಿ ಇಳಿಕೆಯಾಗಿದ್ದ ಹಲವು ದೇಶಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಲಾಗಿತ್ತು. ಆದರೆ, ಈಗ ಅವುಗಳನ್ನು ಕೂಡ ಬಂದ್​ ಮಾಡಲಾಗುತ್ತಿದೆ.

ದಕ್ಷಿಣ ಕೊರಿಯಾದ ರಾಜಧಾನಿಯಲ್ಲಿ ಕರೊನಾ ವೈರಸ್​ ಸೋಂಕಿನ ಪ್ರಕರಣಗಳು ಮತ್ತೆ ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಶಾಲಾ- ಕಾಲೇಜುಗಳನ್ನು ಮತ್ತೆ ಬಂದ್​ ಮಾಡಲಾಗಿದೆ. ಸಿಯೋಲ್​ನಲ್ಲಿ ಕಳೆದ 12 ದಿನಗಳಿಂದ ನಿತ್ಯವೂ ನೂರಕ್ಕೂ ಹೆಚ್ಚು ಹೊಸ ಪ್ರಕರಣಗಳು ವರದಿಯಾಗುತ್ತಿವೆ. ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದು ಕರೊನಾ ನಿಯಂತ್ರಿಸುವಲ್ಲಿ ಪಟ್ಟಿದ್ದ ಶ್ರಮ ನಿಷ್ಪ್ರಯೋಜಕವಾಯ್ತೇ ಎಂಬ ಅನುಮಾನ ಮೂಡಿಸಿದೆ.

ಕಳೆದ ಎರಡು ವಾರಗಳಲ್ಲಿ ಸಿಯೋಲ್​ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕನಿಷ್ಠ 193 ಶಿಕ್ಷಕರು ಹಾಗೂ ವಿದ್ಯಾರ್ಥಿಗಳಲ್ಲಿ ಕರೊನಾ ಸೋಂಕು ಕಂಡುಬಂದಿದೆ ಎಂದು ಶಿಕ್ಷಣ ಸಚಿವ ಯೂ ಎನ್ ಹೇ ಮಾಹಿತಿ ನೀಡಿದ್ದಾರೆ. ಹೀಗಾಗಿ ಶಿಶುವಿಹಾರ, ಪ್ರಾಥಮಿಕ, ಮಾಧ್ಯಮಿಕ ಹಾಗೂ ಪ್ರೌಢಶಾಲೆಗಳು ಸೆ.11ರವರೆಗೆ ಆನ್​ಲೈನ್​ ಮೂಲಕವೇ ನಡೆಯಲಿವೆ ಎಂದು ಅವರು ತಿಳಿಸಿದ್ದಾರೆ.

ದಕ್ಷಿಣ ಕೊರಿಯಾದಲ್ಲಿ ಕಳೆದ 12 ದಿನಗಳಲ್ಲಿ 3,175 ಹೊಸ ಕೇಸ್​ಗಳನ್ನು ಪತ್ತೆ ಹಚ್ಚಲಾಗಿದ್ದರೆ, ಒಟ್ಟಾರೆ ಸೋಂಕಿತರ ಸಂಖ್ಯೆ 17,945ಕ್ಕೆ ಏರಿಕೆಯಾಗಿದೆ. ಈವರೆಗೆ ಮೃತಪಟ್ಟವರ ಸಂಖ್ಯೆ 310 ಆಗಿದೆ.

ಸದ್ಯ ದೇಶದಲ್ಲಿ ಸಭೆ- ಸಮಾರಂಭಗಳಿಗೆ ನಿಷೇಧ ವಿಧಿಸಲಾಗಿದೆ. ನೈಟ್​ಸ್ಪಾಟ್​ ಹಾಗೂ ಚರ್ಚ್​ಗಳನ್ನು ಕೂಡ ಬಂದ್​ ಮಾಡಲಾಗಿದೆ. ದೇಶಾದ್ಯಂತ ಕ್ರೀಡಾ ತರಬೇತಿ ಕೇಂದ್ರಗಳಲ್ಲಿ ಫ್ಯಾನ್​ ಬಳಕೆಗೂ ನಿರ್ಬಂಧ ವಿಧಿಸಲಾಗಿದೆ. ವ್ಯಕ್ತಿಗತ ಅಂತರ ಕಾಯ್ದುಕೊಳ್ಳುವಂತೆ ನಿರ್ದೇಶನ ನೀಡಲಾಗಿದೆ. ವೈರಸ್​ ಹಬ್ಬುವುದು ನಿಯಂತ್ರಣಕ್ಕೆ ಬಾರದಿದ್ದಲ್ಲಿ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂಬುದು ತಜ್ಞರ ಅಭಿಮತ.

LEAVE A REPLY

Please enter your comment!
Please enter your name here