ಕೋವಿಡ್ ನಡುವೆ ರಾಜ್ಯ ಸರ್ಕಾರ ಎಲ್ಲ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಆದರೆ, ಶಿಕ್ಷಕರ ದಿನ ಆಚರಣೆಗೆ ಕೋವಿಡ್ ನೆಪವೊಡ್ಡಿ ನಿಬಂಧನೆಗಳನ್ನು ಹೇರಿದೆ ಎಂದು ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಬೇಸರ ವ್ಯಕ್ತಪಡಿಸಿದರು.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮತ್ತು ಲ್ಯಾಮಿಂಗ್ಟನ್ ಶಾಲೆಯ ಸಹಯೋಗದಲ್ಲಿ ಶನಿವಾರ ನಡೆದ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಅಧ್ಯಕ್ಷೀಯ ಭಾಷಣ ಮಾಡಿದ ಅವರು ‘ಸರ್ಕಾರವೇ ಪ್ರತಿ ವರ್ಷ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ, ಜಿಲ್ಲಾ ಉಸ್ತುವಾರಿಗಳ ಸಮ್ಮುಖದಲ್ಲಿ ದೊಡ್ಡ ಮಟ್ಟದಲ್ಲಿ ಶಿಕ್ಷಕರ ದಿನದ ಕಾರ್ಯಕ್ರಮ ಆಯೋಜಿಸಬೇಕು. ಈ ಕುರಿತು ಮುಖ್ಯಮಂತ್ರಿಗೆ ಪತ್ರ ಬರೆದಿದ್ದೇನೆ’ ಎಂದರು.
‘ಜಗತ್ತಿನಲ್ಲಿ ಭಾರತವನ್ನು ಹೊರತುಪಡಿಸಿದರೆ ಬೇರೆ ಯಾವ ದೇಶದಲ್ಲಿಯೂ ಶಿಕ್ಷಕರ ದಿನ ಆಚರಿಸುವುದಿಲ್ಲ. ರಾಜ್ಯದಲ್ಲಿ ಸಾಕಷ್ಟು ಶಿಕ್ಷಕರ ಹುದ್ದೆಗಳು ಖಾಲಿಯಿದ್ದರೂ ಸರ್ಕಾರ ಭರ್ತಿ ಮಾಡುತ್ತಿಲ್ಲ. ಇದರಿಂದ ಶಿಕ್ಷಕರ ಮೇಲೆ ಒತ್ತಡ ಹೆಚ್ಚಾಗುತ್ತಿದ್ದು; ಹೀಗಾದರೆ ಮಕ್ಕಳಿಂದ ಉತ್ತಮ ಫಲಿತಾಂಶ ನಿರೀಕ್ಷೆ ಮಾಡಲು ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದರು. ಶಿಕ್ಷಣ ಸಚಿವರು ಈ ಬಗ್ಗೆ ಗಮನ ಹರಿಸಬೇಕು, ಖಾಲಿ ಉಳಿದ ಹುದ್ದೆಗಳನ್ನು ಆದಷ್ಟು ಬೇಗ ಭರ್ತಿ ಮಾಡಬೇಕು ಎಂದು ಆಗ್ರಹಿಸಿದರು.
ವಿದ್ಯಾರ್ಥಿಗಳಿಲ್ಲದ ಶಿಕ್ಷಕರ ದಿನ: ಪ್ರತಿ ವರ್ಷ ಸೆ. 5ರಂದು ಶಾಲಾ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ತಮ್ಮ ಶಿಕ್ಷಕರಿಗಾಗಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದರು. ಸ್ಪರ್ಧೆಗಳನ್ನು ಹಮ್ಮಿಕೊಂಡು ವಿಜೇತ ಶಿಕ್ಷಕರಿಗೆ ಬಹುಮಾನ ಕೊಡುತ್ತಿದ್ದರು. ಕೋವಿಡ್ ಪರಿಣಾಮದಿಂದ ಈ ವರ್ಷ ವಿದ್ಯಾರ್ಥಿಗಳಿಲ್ಲದೇ ಶಿಕ್ಷಕರ ದಿನ ನಡೆಯಿತು. ಶಿಕ್ಷಕರೇ ತಮ್ಮ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಂಡಿದ್ದರು.