ಶ್ರೀಶಾಂತ್ ನಿಷೇಧ ಮುಕ್ತಾಯಕ್ಕೆ ಅಭಿಮಾನಿಗಳ ಸಂಭ್ರಮ

0

ಟೀಮ್ ಇಂಡಿಯಾದ ಮಾಜಿ ವೇಗಿ ಎಸ್. ಶ್ರೀಶಾಂತ್ ಅವರ 7 ವರ್ಷಗಳ ನಿಷೇಧ ಶಿಕ್ಷೆ ಭಾನುವಾರ (ಸೆಪ್ಟಂಬರ್ 13) ಮುಕ್ತಾಯಗೊಂಡಿದ್ದು, ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂಭ್ರಮ ಹಂಚಿಕೊಂಡಿದ್ದಾರೆ. ಆಗಸ್ಟ್‌ನಿಂದಲೇ ಬೌಲಿಂಗ್ ಅಭ್ಯಾಸವನ್ನೂ ಆರಂಭಿಸಿರುವ 37 ವರ್ಷದ ಶ್ರೀಶಾಂತ್ ಪುನರಾಗಮನಕ್ಕೆ ಅಭಿಮಾನಿಗಳು ‘ಸೆಕೆಂಡ್ ಸ್ಪೆಲ್’ ಎಂದು ಹೆಸರಿಟ್ಟಿದ್ದು, ಟ್ವಿಟರ್‌ನಲ್ಲಿ ಈಗಾಗಲೆ ಶ್ರೀಶಾಂತ್‌ಸೆಕೆಂಡ್‌ಸ್ಪೆಲ್ ಹ್ಯಾಷ್‌ಟ್ಯಾಗ್ ಭರ್ಜರಿ ಟ್ರೆಂಡಿಂಗ್‌ನಲ್ಲಿದೆ.

2007ರ ಟಿ20 ವಿಶ್ವಕಪ್ ಮತ್ತು 2011ರ ಏಕದಿನ ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದ ಶ್ರೀಶಾಂತ್, 2013ರ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಸಿಲುಕಿಕೊಂಡ ಕಾರಣದಿಂದ ಕ್ರಿಕೆಟ್ ಜೀವನ ಅಧಃಪತನಗೊಂಡಿತ್ತು. ಬಿಸಿಸಿಐ ಮೊದಲಿಗೆ ಅವರಿಗೆ ಆಜೀವ ನಿಷೇಧ ಶಿಕ್ಷೆ ವಿಧಿಸಿದ್ದರೂ, ಅವರು ಸುಪ್ರೀಂ ಕೋರ್ಟ್ ಮೊರೆ ಹೋದ ಕಾರಣದಿಂದಾಗಿ 2019ರಲ್ಲಿ ನಿಷೇಧ ಶಿಕ್ಷೆ 7 ವರ್ಷಗಳಿಗೆ ಇಳಿದಿತ್ತು. ಇದರಿಂದಾಗಿ ಶ್ರೀಶಾಂತ್ 7 ವರ್ಷಗಳ ಬಳಿಕ ಕೊನೆಗೂ ಕ್ರಿಕೆಟ್ ಮೈದಾನಕ್ಕೆ ಮರಳುವಂತಾಗಿದೆ. ಅವರಿನ್ನು ಯಾವುದೇ ಕ್ರಿಕೆಟ್​ ಪಂದ್ಯದಲ್ಲೂ ಆಡಬಹುದಾಗಿದೆ.

ಮುಂಬರುವ ದೇಶೀಯ ಕ್ರಿಕೆಟ್ ಋತುವಿನಲ್ಲಿ ಕೇರಳ ತಂಡದ ಪರ ರಣಜಿ ಟ್ರೋಫಿಯಲ್ಲಿ ಮರಳಿ ಕಣಕ್ಕಿಳಿಯುವ ಹಂಬಲದಲ್ಲಿರುವ ಶ್ರೀಶಾಂತ್, ಮುಂದಿನ ವರ್ಷದ ಐಪಿಎಲ್ ಮತ್ತು ಟಿ20 ವಿಶ್ವಕಪ್‌ನಲ್ಲೂ ಆಡುವ ಕನಸು ಹೊಂದಿದ್ದಾರೆ. ಅವರು ಭಾರತ ತಂಡದ ಪರ 27 ಟೆಸ್ಟ್, 53 ಏಕದಿನ ಮತ್ತು 10 ಟಿ20 ಪಂದ್ಯಗಳನ್ನು ಆಡಿದ್ದು ಕ್ರಮವಾಗಿ 87, 75 ಮತ್ತು 7 ವಿಕೆಟ್ ಕಬಳಿಸಿದ್ದಾರೆ.

ಕರೊನಾ ವೈರಸ್ ಹಾವಳಿಗೆ ಮುನ್ನವೇ ಬೌಲಿಂಗ್ ಅಭ್ಯಾಸ ಆರಂಭಿಸಿದ್ದ ಶ್ರೀಶಾಂತ್ ಬಳಿಕ ಕೆಲಕಾಲ ಬಿಡುವು ಪಡೆದುಕೊಂಡಿದ್ದರು. ಇದೀಗ ಕೇರಳದ ಕ್ರಿಕೆಟ್ ಕ್ಲಬ್ ಒಂದರಲ್ಲಿ ಬೌಲಿಂಗ್ ಅಭ್ಯಾಸ ಮಾಡುತ್ತಿರುವ ಅವರು ಭಾನುವಾರದಿಂದ ಬಿಸಿಸಿಐ ಮಾನ್ಯತೆಯ ಕ್ರಿಕೆಟ್ ಮೈದಾನ ಮತ್ತು ಅದರ ವ್ಯವಸ್ಥೆಗಳನ್ನೂ ಬಳಸಿಕೊಳ್ಳಬಹುದಾಗಿದೆ.

ಟ್ರೆಂಡಿಂಗ್‌ನಲ್ಲಿರುವ ಶ್ರೀಶಾಂತ್ ಅವರ ಪುನರಾಗಮನದ ಸೆಕೆಂಡ್ ಸ್ಪೆಲ್ ಹ್ಯಾಷ್‌ಟ್ಯಾಗ್‌ನಲ್ಲಿ ಅಭಿಮಾನಿಗಳು ಹಂಚಿಕೊಳ್ಳುತ್ತಿರುವ ಸಂಭ್ರಮದ ಕೆಲ ಸಂದೇಶಗಳು ಇಲ್ಲಿವೆ.

(ಏಜೆನ್ಸೀಸ್​)

LEAVE A REPLY

Please enter your comment!
Please enter your name here