ಸಂಗೊಳ್ಳಿ ರಾಯಣ್ಣ ಮತ್ತು ಶಿವಾಜಿ ಒಂದು ಜಾತಿಗೆ ಸೀಮಿತವಲ್ಲ: ಸಚಿವ ಜಾರಕಿಹೊಳಿ

0

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿವಾದ ಸಂಬಂಧ ಸದ್ಯ ಪೀರನವಾಡಿಯಲ್ಲಿ ಪರಿಸ್ಥಿತಿ ಹತೋಟಿಯಲ್ಲಿದೆ ಎಂದು ಬೆಳಗಾವಿ ಉಸ್ತುವಾರಿ ಸಚಿವ ರಮೇಶ್​ ಜಾರಕಿಹೊಳಿ ಹೇಳಿದರು.

ಚಿಕ್ಕೋಡಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪ್ರತಿಕ್ರಿಯಿಸಿದ ಸಚಿವ ರಮೇಶ್​ ಜಾರಕಿಹೊಳಿ, ಸಂಗೊಳ್ಳಿ ರಾಯಣ್ಣ ಹಾಗೂ ಛತ್ರಪತಿ ಶಿವಾಜಿ ಇಬ್ಬರೂ ಈ ದೇಶದ ಆಸ್ತಿ ಇದ್ದಂತೆ. ಅವರನ್ನು ಯಾವ ಜಾತಿಗೂ ಸೀಮಿತ ಮಾಡುವುದಿಲ್ಲ. ಅವರಿಗೆ ಯಾವುದೇ ಅಪಮಾನ ಆಗದ ರೀತಿಯಲ್ಲಿ ಗೊಂದಲ ಪರಿಹರಿಸುತ್ತೇವೆ ಎಂದು ತಿಳಿಸಿದರು.

ಅಲ್ಲದೆ ಈ ಗಲಾಟೆಯ ವಿಚಾರವಾಗಿ ಈಗಾಗಲೇ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದೇನೆ. ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಅವರ ಜೊತೆಯೂ ಮಾತನಾಡಿದ್ದೇನೆ. ಲಾಠಿ ಚಾರ್ಜ್​ ಆಗಿದ್ದು ನಿಜ, ಆದರೆ ಯಾರೂ ಚಪ್ಪಲಿ ಎಸೆದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಅಂತ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.

ಮಧ್ಯರಾತ್ರಿ ಕರ್ನಾಟಕ ರಕ್ಷಣಾ ವೇದಿಕೆ ಬೆಳಗಾವಿ ಜಿಲ್ಲಾಧ್ಯಕ್ಷ ದೀಪಕ್ ಗುಡಗನಟ್ಟಿ ನೇತೃತ್ವದಲ್ಲಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದು, ಸಂಗೊಳ್ಳಿ ರಾಯಣ್ಣ ಪ್ರತಿಮೆ ಎದುರು ಶಿವಾಜಿ ಪ್ರತಿಮೆ ಪ್ರತಿಷ್ಠಾಪನೆಗೆ ಯತ್ನಿಸಿದ ಘಟನೆಯೂ ನಡೆಯಿತು.

ಇದೇ ವಿಚಾರವಾಗಿ ಕನ್ನಡ ಸಂಘಟನೆ ಕಾರ್ಯಕರ್ತರ ಮೇಲೆ ಕಲ್ಲು ತೂರಿದ ಎಂಇಎಸ್ ಕಾರ್ಯಕರ್ತರ ಮೇಲೆ ನಗರ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ಸ್ಥಳಕ್ಕೆ ನಿರ್ಮಾಣವಾಗಿದ್ದು, ಒಂದು ಸಿಎಆರ್, ಡಿಎಆರ್ ತುಕಡಿ ಆಗಮಿಸಿದೆ.

ಸಂಗೊಳ್ಳಿ ರಾಯಣ್ಣ ಪುತ್ಥಳಿ ಮರುಸ್ಥಾಪನೆ ಬಳಿಕ ವಿಜಯೋತ್ಸವ ನಡೆಸಲು ಬೈಕ್ rally ಮೂಲಕ ತೆರಳುತ್ತಿದ್ದ ವೇಳೆ ಎಂಇಎಸ್ ಕಾರ್ಯಕರ್ತರು ಕನ್ನಡ ಸಂಘಟನೆ ಮೇಲೆ ಕಲ್ಲು ತೂರಾಟ ನಡೆಸಿದರು. ಪರಿಸ್ಥಿತಿ ಹತೋಟಿಗೆ ತರಲು ಎಂಇಎಸ್ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿಚಾರ್ಜ್ ಮಾಡಿದರು.

LEAVE A REPLY

Please enter your comment!
Please enter your name here