ಸಂಜು-ಸ್ಮಿತ್ ಸ್ಫೋಟಕ ಬ್ಯಾಟಿಂಗ್​: ಚೆನ್ನೈಗೆ ಬೃಹತ್​ ಮೊತ್ತದ ಗುರಿ ನೀಡಿದ ರಾಜಸ್ಥಾನ

0

ಶಾರ್ಜಾ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಪಿಲ್​ ಟೂರ್ನಿಯ ನಾಲ್ಕನೇ ಪಂದ್ಯದಲ್ಲಿ ನಾಯಕ ಸ್ಟೀವನ್​ ಸ್ಮೀತ್ ಮತ್ತು ಸಂಜು ಸ್ಯಾಮ್ಸನ್​ ಅವರ ಸ್ಫೋಟಕ ಆಟದ ನೆರವಿನಿಂದ ರಾಜಸ್ಥಾನ ರಾಯಲ್ಸ್​ ತಂಡ ಎದುರಾಳಿ ಚೆನ್ನೈ ಸೂಪರ್​ ಕಿಂಗ್ಸ್​ ತಂಡಕ್ಕೆ ಬೃಹತ್​ ಮೊತ್ತದ ಗುರಿ ನೀಡಿದೆ. ​

ಟಾಸ್​ ಸೋತು ಬ್ಯಾಟಿಂಗ್​ ಆರಂಭಿಸಿದ ರಾಜಸ್ಥಾನ ರಾಯಲ್ಸ್​ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 216 ರನ್​ ಕಲೆಹಾಕಿತು.

ಆರಂಭಿಕರಾಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್​ (6) ತಂಡದ ಮೊತ್ತ 11 ಇರುವಾಗಲೇ ಕ್ಯಾಚಿತ್ತು ನಿರ್ಗಮಿಸುವ ಮೂಲಕ ಆರಂಭಿಕ ಆಘಾತ ನೀಡಿದರು. ಬಳಿಕ ನಾಯಕ ಸ್ಟೀವ್​ ಸ್ಮಿತ್​ ಜತೆಗೂಡಿದ ಯುವ ಆಟಗಾರ ಸಂಜು ಸ್ಯಾಮ್ಸನ್​ ಶತಕದ ಜತೆಯಾಟವಾಡಿ ತಂಡಕ್ಕೆ ಭದ್ರ ಬುನಾದಿ ಹಾಕಿದರು.

ಕೇವಲ 34 ಎಸೆತಗಳಲ್ಲಿ 9 ಸಿಕ್ಸರ್,​ 1 ಬೌಂಡರಿ ನೆರವಿನೊಂದಿಗೆ ಸ್ಫೋಟಕ 74 ರನ್​ ಕಲೆಹಾಕಿದ್ದ ಸ್ಯಾಮ್ಸನ್​ ಬಿರುಸಿನ ಹೊಡೆತಕ್ಕೆ ಕೈಹಾಕಿ ಕ್ಯಾಚಿತ್ತು ನಿರ್ಗಮಿಸಿದರು. ಇದರ ಬೆನ್ನಲ್ಲೇ ಬಾಲಂಗೋಚಿಯಂತೆ ಡೇವಿಡ್​ ಮಿಲ್ಲರ್ (0), ರಾಬಿನ್​ ಉತ್ತಪ್ಪ (5), ರಾಹುಲ್​ ತೆವಾಟಿಯಾ (10), ರಿಯಾನ್​ ಪರಾಗ್​ (6) ಟಾಮ್​ ಕರನ್​ (0) ವಿಕೆಟ್​ ಒಪ್ಪಿಸಿ ಪೆವಲಿಯನ್​ ಸೇರಿದರು.

ಇತ್ತ ಆರಂಭದಿಂದಲೂ ನಾಯಕನ ಜವಬ್ದಾರಿಯುತ ಆಟವಾಡಿದ ಸ್ಮಿತ್​ 47 ಎಸೆತಗಳಲ್ಲಿ 4 ಸಿಕ್ಸರ್​, 4 ಬೌಂಡರಿ ನೆರವಿನೊಂದಿಗೆ 69 ರನ್​ ಗಳಿಸಿ ತಂಡಕ್ಕೆ ಆಸರೆಯಾದರು. ಕೊನೆಯಲ್ಲಿ ಅಬ್ಬರಿಸಿದ ಜೋಫ್ರಾ ಆರ್ಚರ್​ ಕೇವಲ 8 ಎಸೆತಗಳಲ್ಲಿ 4 ಸಿಕ್ಸರ್​ ನೆರವಿನೊಂದಿಗೆ 27* ರನ್​ ಗಳಿಸಿದರೆ, ಟಾಮ್​ ಕರನ್ (10*) ರನ್​ ಕಲೆಹಾಕಿ ಅಜೇಯರಾಗಿ ಉಳಿದರು.

ಸಿಎಸ್​ಕೆ ಪರ ಸ್ಯಾಮ್​ ಕರನ್ 3 ವಿಕೆಟ್​ ಕಬಳಿಸಿದರೆ, ದೀಪಕ್​ ಚಹಾರ್​, ಲುಂಗಿ ಎನ್‌ಗಿಡಿ ಹಾಗೂ ಪಿಯೂಷ್​ ಚಾವ್ಲ ತಲಾ 1 ವಿಕೆಟ್​ ಪಡೆದರು. (ಏಜೆನ್ಸೀಸ್​)​

LEAVE A REPLY

Please enter your comment!
Please enter your name here