ಉದ್ಯಾನದಲ್ಲಿ ನಟಿ ಸಂಯುಕ್ತಾ ಹೆಗ್ಡೆ ಮತ್ತು ಅವರ ಸ್ನೇಹಿತೆಯರ ಜತೆ ಜಗಳ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕಿ ಕವಿತಾ ರೆಡ್ಡಿ ವಿರುದ್ಧ ವಿವಿಧ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಲಾಗಿದೆ.
ಸರ್ಜಾಪುರ ರಸ್ತೆಯ ಅಗರ ಕೆರೆಯ ಉದ್ಯಾನದಲ್ಲಿ ಶುಕ್ರವಾರ ನಡೆದ ಕಿತ್ತಾಟದ ಕುರಿತು ನಟ ಸಂಯುಕ್ತಾ ಹೆಗ್ಡೆ, ಎಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪಾರ್ಕ್‌ನಲ್ಲಿ ವರ್ಕೌಟ್ ನಡೆಸುತ್ತಿದ್ದ ಸಂಯುಕ್ತಾ ಹೆಗ್ಡೆ ಸರಿಯಾದ ರೀತಿ ಬಟ್ಟೆ ಧರಿಸಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದ ಕವಿತಾ ರೆಡ್ಡಿ, ಸಂಯುಕ್ತಾ ಸ್ನೇಹಿತೆ ಮೇಲೆ ಹಲ್ಲೆ ನಡೆಸಿದ್ದರು.
ಕವಿತಾ ರೆಡ್ಡಿ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 323, 504 (b) ಮತ್ತು 506 ಅಡಿ ಎಚ್‌ಎಸ್‌ಆರ್ ಲೇಔಟ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಈ ಘಟನೆ ತೀವ್ರ ವಿವಾದ ಸೃಷ್ಟಿಸಿದ ಬಳಿಕ ಕಾಂಗ್ರೆಸ್ ನಾಯಕಿ ಕವಿತಾ ರೆಡ್ಡಿ ಸಾಮಾಜಿಕ ಜಾಲತಾಣದ ಮೂಲಕ ಸಂಯುಕ್ತಾ ಹೆಗ್ಡೆ ಅವರಲ್ಲಿ ಬಹಿರಂಗ ಕ್ಷಮೆ ಕೋರಿದ್ದಾರೆ. ‘ನಾನು ಅನೈತಿಕ ಪೊಲೀಸ್‌ಗಿರಿಯನ್ನು ವಿರೋಧಿಸುವವಳು. ಪ್ರಗತಿಪರ ಮಹಿಳೆ ಹಾಗೂ ಜವಾಬ್ದಾರಿಯುತ ನಾಗರಿಕಳಾಗಿ ಆ ರೀತಿ ವರ್ತಿಸಬಾರದಿತ್ತು. ಇದಕ್ಕಾಗಿ ಸಂಯುಕ್ತಾ ಹೆಗ್ಡೆ ಅವರಲ್ಲಿ ಪ್ರಾಮಾಣಿಕವಾಗಿ ಕ್ಷಮೆ ಕೋರುತ್ತೇನೆ’ ಎಂದು ಕವಿತಾ ಹೇಳಿದ್ದರು.
ಕವಿತಾ ರೆಡ್ಡಿ ಅವರ ಕ್ಷಮೆಯನ್ನು ಸಂಯುಕ್ತಾ ಹೆಗ್ಡೆ ಸ್ವೀಕರಿಸಿದ್ದಾರೆ. ಈ ಘಟನೆಯಿಂದ ನಾವು ಮುಂದೆ ಸಾಗಬಹುದು ಮತ್ತು ಮಹಿಳೆಯರು ಎಲ್ಲಾ ಕಡೆ ಸುರಕ್ಷಿತರು ಎಂಬ ಭಾವನೆ ಮೂಡಿಸಬಹುದು ಎಂದು ಭರವಸೆ ಹೊಂದಿದ್ದೇನೆ ಎಂದು ಸಂಯುಕ್ತಾ ಹೆಗ್ಡೆ ತಿಳಿಸಿದ್ದಾರೆ.