ಕಾನೂನು ಎಲ್ಲರಿಗೂ ಒಂದೇ. ಬಡವ-ಶ್ರೀಮಂತ, ಸರ್ಕಾರಿ-ಖಾಸಗಿ ಎಂಬ ತಾರತಮ್ಯ ಇಲ್ಲ. ರಸ್ತೆ ಸಂಚಾರ ನಿಯಮಯದಲ್ಲೂ ಅಷ್ಟೆ. ಯಾರೇ ನಿಯಮ ಉಲ್ಲಂಘಿಸಿದ್ದರೂ ದಂಡ ತೆರಬೇಕು ಎಂಬುದಕ್ಕೆ ತಾಜಾ ಉದಾಹರಣೆ ಈ ಪ್ರಕರಣ.
ಹೌದು, ಸಂಚಾರ ನಿಯಮ ಉಲ್ಲಂಘಿಸಿಕೊಂಡು ಬರುತ್ತಿದ್ದ ಬಿಎಂಟಿಸಿ ಬಸ್ ಡ್ರೈವರ್ಗೆ ಕೆ.ಆರ್. ಪುರಂ ಸಂಚಾರಿ ಪೊಲೀಸರು ದಂಡ ವಿಧಿಸಿದ್ದಾರೆ. ಇದರ ಬೆನ್ನಲ್ಲೇ ಸಂಸದರೊಬ್ಬರ ಕಾರಿಗೂ ಪೊಲೀಸರು ದಂಡ ಹಾಕಿದ್ದಾರೆ.
41ನೇ ಡಿಪೋದ ಬಿಎಂಟಿಸಿ ಬಸ್ ಚಾಲಕ ನಾಗರಾಜ್ ದಂಡ ಕಟ್ಟಿದ್ದಾರೆ. ಹೂಡಿ ಮುಖ್ಯರಸ್ತೆ ಕಡೆಯಿಂದ ಕೆಆರ್ ಪುರಂ ಕಡೆಗೆ ಹೊರಟಿದ್ದ ನಾಗರಾಜ್, ಒನ್ ವೇ ಮಾರ್ಗದಲ್ಲಿ ಬಸ್ ಚಾಲನೆ ಮಾಡಿಕೊಂಡು ಬರುತ್ತಿದ್ದರು. ಕೂಡಲೇ ಬಸ್ಅನ್ನು ತಡೆದ ಕೆ.ಆರ್.ಪುರಂ ಟ್ರಾಫಿಕ್ ಪೊಲೀಸ್ ಇನ್ಸ್ಪೆಕ್ಟರ್ ಎಂ.ಎ. ಮಹಮದ್ ಅವರು ಚಾಲಕನಿಗೆ ದಂಡದ ಬಿಸಿ ಮುಟ್ಟಿಸಿದರು.
ಇದೇ ರಸ್ತೆಯಲ್ಲಿ ಬಂದ ಆಂಧ್ರದ ಗುಂಟೂರಿನ ಸಂಸದರಿಗೆ ಸೇರಿದ ಜಾಗ್ವಾರ್ ಕಾರಿಗೂ ದಂಡ ಹಾಕಲಾಗಿದೆ. ಸದರಿ ಕಾರನ್ನು ಸ್ಥಳೀಯ ಪ್ರತಿಷ್ಠಿತ ಆಸ್ಪತ್ರೆಯ ವೈದ್ಯ ಚರಣ್ ಚಾಲನೆ ಮಾಡುತ್ತಿದ್ದರು. ಅವರಿಂದ ದಂಡ ವಸೂಲಿ ಮಾಡಲಾಗಿದೆ.