ಸಚಿವರಿಗೆ ಕಪ್ಪು ಬಾವುಟ ಪ್ರದರ್ಶನ, ರೈತರು ವಶಕ್ಕೆ

0

ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ರೈತ ವಿರೋಧಿ ಕಾಯ್ದೆ ಹೋರಾಟ ಸಮಿತಿಯ ಮುಖಂಡರು ಹಾಗೂ ಕಾರ್ಯಕರ್ತರು ಶನಿವಾರ ಉಸ್ತುವಾರಿ ಸಚಿವ ಎಸ್.‌ಸುರೇಶ್ ಕುಮಾರ್ ಅವರಿಗೆ ಕಪ್ಪು ಬಾವುಟ ಪ್ರದರ್ಶಿಸಿದರು.

ಕಪ್ಪು‌ಬಾವುಟ ಪ್ರದರ್ಶಿಸಿದ ಹಾಗೂ ವಿವಿಧ ಕಡೆಗಳಲ್ಲಿ ಪ್ರದರ್ಶನಕ್ಕೆ‌ ಮುಂದಾದ ರೈತ ಮುಖಂಡರು‌ ಹಾಗೂ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು ಸಂಜೆಯವರೆಗೂ ಇರಿಸಿಕೊಂಡರು.

ಬಿಜೆಪಿ ಕೋರ್ ಕಮಿಟಿ‌ ಸಭೆ‌ ಹಾಗೂ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಕ್ಕಾಗಿ ಎಸ್.ಸುರೇಶ್ ಕುಮಾರ್ ಅವರು ಶನಿವಾರ ಜಿಲ್ಲೆಗೆ ಭೇಟಿ ನೀಡಿದ್ದರು.

ಹೋರಾಟ ಸಮಿತಿಯ ಮುಖಂಡರು ಹಾಗೂ ಕಾರ್ಯಕರ್ತರು, ಸಚಿವರು ಬರುವ ಮಾರ್ಗದ ವಿವಿಧ ಕಡೆ ನಿಂತಿದ್ದರು. ಬೆಂಗಾವಲು ಪಡೆಯೊಂದಿಗೆ‌ ಸಚಿವರು ಹೋಗುತ್ತಿದ್ದ ಸಂದರ್ಭದಲ್ಲಿ ಎರಡು ತಂಡಗಳು ತಾಲ್ಲೂಕಿನ ಮಂಗಲ ಹಾಗೂ ಸಂತೇಮರಹಳ್ಳಿ ರಸ್ತೆಯಲ್ಲಿ ಕಪ್ಪು ಬಾವುಟ ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿತು.

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹೊನ್ನೂರು ಪ್ರಕಾಶ್, ಕಬ್ಬು ಬೆಳೆಗಾರರ ಸಂಘದ ಹಳ್ಳಿಕೆರೆಹುಂಡಿ ಭಾಗ್ಯರಾಜ್, ಮುಖಂಡರಾದ ಕಡಬೂರು ಮಂಜುನಾಥ್, ಕಂದೇಗಾಲ ಋಷಿ, ಹುಲಿಗನಾಯಕ, ಮಾಡ್ರಳ್ಳಿ ಮಹದೇವಪ್ಪ, ಹೊನ್ನೂರು ಬಸವಣ್ಣ, ಜಯ್ ಕುಮಾರ್‌ ಹೆಗ್ಗೊಠಾರ, ಪೃಥ್ವಿ, ಕುಮಾರ್ ಮೇಲಾಜಿಪುರ, ಜಯಪ್ಪ, ಮಲ್ಲಿಕಾರ್ಜುನ, ರಾಜಶೇಖರ ಉಡಿಗಾಲ, ‌ಮಾದಪ್ಪ ದೇಶೀಗೌಡನಪುರ ಇತರರನ್ನು ಪೊಲೀಸರು ವಶಕ್ಕೆ ಪಡೆದರು.

‘ಭೂ ಸುಧಾರಣಾ ತಿದ್ದುಪಡಿ ಕಾಯ್ದೆಯನ್ನು ವಾಪಸ್ ಪಡೆಯುವ‌ ನಿಟ್ಟಿನಲ್ಲಿ ಉಸ್ತುವಾರಿ ಸಚಿವರು ಮುಖ್ಯಮಂತ್ರಿ ಅವರನ್ನು ಮನವೊಲಿಸುವ ಪ್ರಯತ್ನ ಮಾಡಿಲ್ಲ. ಜಿಲ್ಲೆಯ ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸಭೆ ಕರೆದಿಲ್ಲ. ರೈತರನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ’ ಎಂದು‌ ರೈತ ಮುಖಂಡರು ಆರೋಪಿಸಿದರು.

ಆಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲೂ ರೈತ ಮುಖಂಡರು ಸಚಿವರಿಗೆ ಕಪ್ಪು ಬಾವುಟ ಪ್ರದರ್ಶಿಸಲು ಮುಂದಾಗಿದ್ದರು. ಆದರೆ, ಇದಕ್ಕೆ ಪೊಲೀಸರು ಅವಕಾಶ ನೀಡಿರಲಿಲ್ಲ. ಮೊದಲೇ ಎಲ್ಲರನ್ನೂ ವಶಕ್ಕೆ‌ ಪಡೆದಿದ್ದರು.

LEAVE A REPLY

Please enter your comment!
Please enter your name here