ಭಾರತದ ಸರ್ಕಾರಿ ಶಾಲೆಗಳಲ್ಲಿರುವ ಶೇ.75ರಷ್ಟು ಶೌಚಾಲಯಗಳು ಬಳಕೆಗೆ ಸೂಕ್ತವಾಗಿಲ್ಲ ಎಂಬ ವಿಚಾರ ಹೊರ ಬಿದ್ದಿದೆ. ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ನೀಡಿರುವ ವರದಿಯಲ್ಲಿ ಈ ಬಗ್ಗೆ ಉಲ್ಲೇಖಿಸಲಾಗಿದೆ.
ದೇಶದ 15 ರಾಜ್ಯಗಳಲ್ಲಿರುವ ಶೇ.75 ಶಾಲೆಗಳಲ್ಲಿ ಶೌಚಾಲಯಗಳು ಬಳಕೆಗೆ ಯೋಗ್ಯವಾಗಿಲ್ಲ ಎಂದು ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ವರದಿಯಿಂದ ತಿಳಿದು ಬಂದಿದೆ. ಶೌಚಾಲಯಗಳಿದ್ದರೂ ಸ್ವಚ್ಛತೆ ಮಾನದಂಡಗಳಿಗೆ ಅವು ಹೊಂದಿಕೆಯಾಗುತ್ತಿಲ್ಲ.
ಸಂಸತ್ ನಲ್ಲಿ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ನೀಡಿರುವ ವರದಿ ಬಗ್ಗೆ ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ಪ್ರಸ್ತಾಪಿಸಿದರು. ಸ್ವಚ್ಛ ಭಾರತದ ಬಗ್ಗೆ ಹೇಳುವ ಕೇಂದ್ರ ಸರ್ಕಾರವು ಶಾಲೆಗಳಲ್ಲಿನ ಶೌಚಾಲಯಗಳ ನಿರ್ವಹಣೆ ಬಗ್ಗೆ ನಿರ್ಲಕ್ಷ್ಯ ತೋರಿದ್ದಕ್ಕೆ ಕಿಡಿ ಕಾರಿದ್ದಾರೆ.
ಸಿಎಜಿ ವರದಿಯಲ್ಲಿ ಉಲ್ಲೇಖಿಸಿರುವುದೇನು:
ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ವರದಿಯಲ್ಲಿ ಶೌಚಾಲಯಗಳ ಸ್ಥಿತಿಯ ಬಗ್ಗೆ ಅಂಕಿ-ಅಂಶಗಳಲ್ಲಿ ಉಲ್ಲೇಖಿಸಲಾಗಿದೆ. ಪ್ರತಿ 2326 ಶೌಚಾಲಯಗಳ ಪೈಕಿ 1812 ಶೌಚಾಲಯಗಳಲ್ಲಿ ನೀರಿನ ವ್ಯವಸ್ಥೆಯೇ ಇಲ್ಲ. ಪ್ರತಿ 1812 ಶೌಚಾಲಯಗಳಲ್ಲಿ 715 ಶೌಚಾಲಯಗಳಲ್ಲಿ ಸ್ವಚ್ಛತೆಯಿಲ್ಲ. ಶೇ.75ರಷ್ಟು ಸರ್ಕಾರಿ ಶಾಲೆಗಳ ಶೌಚಾಲಯದ ಸ್ಯಾನಿಟೈಸ್, ಸೋಪ್ ಮತ್ತು ನೀರಿನ ಸೌಲಭ್ಯಗಳಿಲ್ಲ ಎಂದು ವರದಿಯಿಂದ ತಿಳಿದು ಬಂದಿದೆ.
ಸರ್ಕಾರದ ಶೇ.40ರಷ್ಟು ಶಾಲೆಗಳಲ್ಲಿ ಶೌಚಾಲಯಗಳೇ ಇಲ್ಲ:
ಸ್ವಚ್ಛ ಭಾರತ್ ಯೋಜನೆಯ ಅಡಿಯಲ್ಲಿ ಸ್ವಚ್ಛ ವಿದ್ಯಾಲಯ ಅಭಿಯಾನ ಆರಂಭಿಸಲಾಗಿತ್ತು. 2014ರಲ್ಲಿ ಆರಂಭವಾದ ಅಭಿಯಾನದ ಅಡಿ ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ ನಿರ್ಮಾಣ ಮಾಡುತ್ತಿರುವ ಬಗ್ಗೆ ಕೇಂದ್ರ ಸರ್ಕಾರವು ಹೇಳಿತ್ತು. ಆದರೆ ಶೇ.40ರಷ್ಟು ಸರ್ಕಾರಿ ಶಾಲೆಗಳಲ್ಲಿ ಶೌಚಾಲಯಗಳೇ ಇಲ್ಲದಿದ್ದಾಗ ಬಯಲು ಮೂತ್ರ ವಿಸರ್ಜನೆ ಮುಕ್ತ ದೇಶ ನಿರ್ಮಾಣ ಹೇಗೆ ಸಾಧ್ಯವಾಗುತ್ತದೆ ಎಂದು ಪಿ.ಚದಂಬರಂ ಪ್ರಶ್ನಿಸಿದ್ದಾರೆ.