ಇಲ್ಲಿನ ಮಹಾರಾಷ್ಟ್ರ ಸರ್ಕಾರ ನಡೆಸುತ್ತಿರುವ ಕೋವಿಡ್ 19 ಆಸ್ಪತ್ರೆಯ ಆವರಣದಲ್ಲಿ ‘ದ್ರವರೂಪಿ ಆಮ್ಲಜನಕ’ (ಲಿಕ್ವಿಡ್ ಆಕ್ಸಿಜನ್) ತಯಾರಿಕಾ ಘಟಕವನ್ನು ನಿರ್ಮಿಸಲಾಗಿದೆ. ಇದರಿಂದ ಕೊರೊನಾ ಸೋಂಕಿನಿಂದ ಮೃತಪಡುವವರ ಪ್ರಮಾಣ ಇಳಿಕೆಯಾಗಿದೆ ಎಂದು ಹಿರಿಯ ವೈದ್ಯಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಹಾರಾಷ್ಟ್ರ ಸರ್ಕಾರದ ಆರೋಗ್ಯ ಸಚಿವ ರಾಜೇಶ್ ತೋಪೆ ಆ ಘಟಕವನ್ನು ಉದ್ಘಾಟಿಸಿದ್ದಾರೆ. ಈ ಘಟಕದಲ್ಲಿ ನಿತ್ಯ ಲಿಕ್ವಿಡ್ ಆಕ್ಸಿಜನ್ ತಯಾರಿಸಿ, ಟ್ಯಾಂಕ್‌ಗಳಲ್ಲಿ ತುಂಬಿಸಿಡಲಾಗುತ್ತದೆ.
ಈ ಘಟಕದಿಂದ ಆಸ್ಪತ್ರೆಯಲ್ಲಿರುವ ನೂರು ರೋಗಿಗಳಿಗೆ ಏಕಕಾಲಕ್ಕೆ ಆಕ್ಸಿಜನ್ ಪೂರೈಕೆ ಮಾಡಬಹುದಾಗಿದೆ ಎಂದು ಆಸ್ಪತ್ರೆಯ ಸರ್ಜನ್ ಅರ್ಚನಾ ಭೋಸ್ಲೆ ಹೇಳಿದರು.
ಕೋವಿಡ್ 19 ರೋಗಿಗಳಿಗೆ ಆರೈಕೆ ಮಾಡುವಲ್ಲಿ ಆಕ್ಸಿಜನ್ ಚಿಕಿತ್ಸೆ ಬಹಳ ಪ್ರಮುಖವಾಗಿದೆ. ಈ ಘಟಕ ಆರಂಭಕ್ಕ ಮುನ್ನ ಜಿಲ್ಲೆಯಲ್ಲಿ ಕೋವಿಡ್19 ಸೋಂಕಿನಿಂದ ಸಾಯುವವರ ಶೇ 4.5ರಷ್ಟು ಇತ್ತು. ಈಗ ಅದು ಶೇ 2.8ಕ್ಕೆ ಇಳಿದಿದೆ. ಅಷ್ಟೇ ಅಲ್ಲ, ಕೊರೊನಾ ಸೋಂಕಿನಿಂದ ಗುಣಮುಖರಾಗುವವರ ಪ್ರಮಾಣ ಶೇ 71ರಷ್ಟಾಗಿದೆ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.