ಸಿದ್ದರಾಮಯ್ಯ ಕೊಡುಗೆ ಸ್ಮರಿಸಿದ ಪುಟ್ಟರಂಗಶೆಟ್ಟಿ

0

ಚಾಮರಾಜನಗರ: ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಚಾಮರಾಜನಗರ ನಗರಸಭೆ ವತಿಯಿಂದ ನಿರ್ಮಿಸಲಾದ ವಾಣಿಜ್ಯ ಸಂಕೀರ್ಣ ಹಾಗೂ ನವೀಕೃತ ಖಾಸಗಿ ಬಸ್‌ ನಿಲ್ದಾಣವನ್ನು ಪೌರಾಡಳಿತ ಸಚಿವ ನಾರಾಯಣ ಗೌಡ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು ಉದ್ಘಾಟಿಸಿದರು.

ಹೊಸ ಖಾಸಗಿ ಬಸ್‌ ನಿಲ್ದಾಣದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಮಾತನಾಡುವ ಸಂದರ್ಭದಲ್ಲಿ ಕಾಂಗ್ರೆಸ್‌ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಜಿಲ್ಲೆ ಹಾಗೂ ಜಿಲ್ಲಾ ಕೇಂದ್ರದ ಅಭಿವೃದ್ಧಿಗಾಗಿ ನೀಡಿದ ಕೊಡುಗೆಗಳನ್ನು ಸ್ಮರಿಸಿದರು. ಇಬ್ಬರೂ ಸಚಿವರು ತಮ್ಮ ಭಾಷಣದಲ್ಲಿ, ಎರಡೂ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡಿದ ಸಿದ್ದರಾಮಯ್ಯ ಅವರ ಹೆಸರು ಪ್ರಸ್ತಾಪಿಸದೇ ಇದ್ದುದಕ್ಕೆ ಪರೋಕ್ಷವಾಗಿ ಅಸಮಾಧಾನವನ್ನೂ ವ್ಯಕ್ತಪಡಿಸಿದರು.

‘ಚಾಮರಾಜನಗರ ಇಷ್ಟು ಅಭಿವೃದ್ಧಿಯಾಗಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರಣ. ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಚಾಮರಾಜನಗರ ಜಿಲ್ಲೆಯ ಅಭಿವೃದ್ಧಿಗೆ ಸಾವಿರಾರು ಕೋಟಿ ಅನುದಾನ ಕೊಟ್ಟರು. ಜಿಲ್ಲಾ ಕೇಂದ್ರದ ಅಭಿವೃದ್ದಿಗಾಗಿ ₹50 ಕೋಟಿ ವಿಶೇಷ ಅನುದಾನ, ದೇವಸ್ಥಾನ ಅಭಿವೃದ್ಧಿಗೆ ₹2 ಕೋಟಿ, ಮೆಡಿಕಲ್ ಕಾಲೇಜು, ಮೆಡಿಕಲ್ ಕಾಲೇಜು ಬಳಿ ಜಿಲ್ಲಾಸ್ಪತ್ರೆ, ಬಿ.ರಾಚಯ್ಯ ಜೋಡಿರಸ್ತೆ ಅಭಿವೃದ್ದಿಗೆ ₹37 ಕೋಟಿ ಹಾಗೂ ರಾಷ್ಟ್ರೀಯ ಹೆದ್ದಾರಿಗಾಗಿ ಅನುದಾನ ಸೇರಿದಂತೆ ಕೇಳಿದ್ದಕ್ಕೆಲ್ಲ ದುಡ್ಡು ಕೊಟ್ಟರು. ಜಿಲ್ಲೆಯಲ್ಲಿ ಕುಡಿಯುವ ನೀರಿನ ಯೋಜನೆಗೂ ಹಣಕಾಸಿನ ನೆರವು ನೀಡಿದ್ದರು’ ಎಂದರು.

ಇಲ್ಲಿ ಭಾಷಣ ಮಾಡುವಾಗ ಇವರು ಮುಖ್ಯಮಂತ್ರಿ ವಿಶೇಷ ಅನುದಾನದಲ್ಲಿ ವಾಣಿಜ್ಯ ಕಟ್ಟಡ ಹಾಗೂ ನವೀಕೃತ ಖಾಸಗಿ ಬಸ್ ನಿಲ್ದಾಣವಾಗಿದೆ ಎಂದು ಹೇಳುತ್ತಾರೆ. ಯಾವ ಮುಖ್ಯಮಂತ್ರಿ ನೀಡಿದ ವಿಶೇಷ ಅನುದಾನ ಎನ್ನುವುದನ್ನು
ಹೇಳಬೇಕು. ಕೊಟ್ಟಿದ್ದನ್ನು ನೆನಪಿಸಿಕೊಳ್ಳುವುದು ಮಾನವನ ಗುಣ. ಹೀಗಾಗಿ ನಾನು ಮಾಜಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸ್ಮರಿಸುತ್ತೇನೆ’ ಎಂದು ಪುಟ್ಟರಂಗಶೆಟ್ಟಿ ಅವರು ಹೇಳಿದರು.

‘ನಗರದ ಅಭಿವೃದ್ಧಿಗೆ ಸರ್ಕಾರ ಎರಡು ಕೆಲಸ ಮಾಡಿಕೊಡಬೇಕು. ₹270 ಕೋಟಿ ವೆಚ್ಚದ ಕುಡಿಯುವ ನೀರಿನ ಸಮಗ್ರ ಯೋಜನಾ ವರದಿ ಸಿದ್ಧವಾಗಿದೆ. ಅದಕ್ಕೆ ಒಪ್ಪಿಗೆ ನೀಡಬೇಕು ಹಾಗೂ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಕ್ಕೆ ರೇಷ್ಮೆ ಇಲಾಖೆಯಿಂದ ಮೂರೂವರೆ ಎಕರೆ ಜಾಗ ಬೇಕಿದೆ. ಅದು ಅಂತಿಮ ಹಂತದಲ್ಲಿ ಅದಕ್ಕೆ ಒಪ್ಪಿಗೆ ನೀಡಿದರೆ ಕಾಮಗಾರಿ ಆರಂಭಿಸಬಹುದು’ ಎಂದರು.

‘ಚಾಮರಾಜನಗರಕ್ಕೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಕರೆದುಕೊಂಡು ಬಂದು, ಇಲ್ಲಿನ ಜನರ ಕಷ್ಟಗಳನ್ನು ಆಲಿಸಿ, ಅವರ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳಬೇಕು’ ಎಂದೂ ಇಬ್ಬರೂ ಸಚಿವರಲ್ಲಿ ಅವರು ಮನವಿ ಮಾಡಿದರು.

ಪುಟ್ಟರಂಗಶೆಟ್ಟಿ ಭಾಷಣ ಮುಗಿಸಿ ತಮ್ಮ ಸ್ಥಾನಕ್ಕೆ ಹೋಗುತ್ತಿದ್ದಂತೆಯೇ, ಈ ವಿಚಾರವಾಗಿ ಸುರೇಶ್‌ ಕುಮಾರ್‌ ಹಾಗೂ ಶಾಸಕರಿಗೆ ಸಣ್ಣ ಮಟ್ಟಿನ ಮಾತು-ಪ್ರತಿಮಾತು ನಡೆಯಿತು.

ಇದಕ್ಕೂ ಮೊದಲು ಮಾತನಾಡಿದ ಸುರೇಶ್‌ ಕುಮಾರ್‌ ಅವರು, ‘ಈ ಎರಡು ಯೋಜನೆಗಳು ಪೂರ್ಣಗೊಳ್ಳುವುದನ್ನು ಬಹಳ ದಿನಗಳಿಂದ ಎದುರು ನೋಡುತ್ತಿದ್ದೆವು. ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಎರಡೂ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಇನ್ನುಳಿದ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು’ ಎಂದರು.

‘ನಗರಸಭೆ ಚುನಾವಣೆಯಲ್ಲಿ ಗೆದ್ದು ಎರಡು ವರ್ಷವಾದರೂ ಸದಸ್ಯರಿಗೆ ಅಧಿಕಾರ ಸಿಕ್ಕಿಲ್ಲ. ಈಗ ಉಂಟಾಗಿರುವ ಗೊಂದಲಗಳನ್ನು ಆದಷ್ಟು ಬೇಗ ಪರಿಹರಿಸಲು ಪೌರಾಡಳಿತ ಸಚಿವರಾದ ನಾರಾಯಣಗೌಡ ಅವರು ಕ್ರಮ ಕೈಗೊಳ್ಳಬೇಕು’ ಎಂದು ಹೇಳಿದರು.

ನಾರಾಯಣ ಗೌಡ ಅವರು ಮಾತನಾಡಿ, ‘ಯಡಿಯೂರಪ್ಪ ಅವರು ನನಗೆ ಪೌರಾಡಳಿತ, ತೋಟಗಾರಿಕೆ ಮತ್ತು ರೇಷ್ಮೆ ಖಾತೆಗಳ ಜವಾಬ್ದಾರಿ ವಹಿಸಿದ್ದಾರೆ. ಜನರ ಆಶೀರ್ವಾದ ಹಾಗೂ ಸಹೋದ್ಯೋಗಿಗಳ ಸಹಕಾರದಿಂದ ನಿಭಾಯಿಸುತ್ತಿದ್ದೇನೆ’ ಎಂದರು. ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ಕುಮಾರ್‌ ಅವರನ್ನು ಸಚಿವರು ಹೊಗಳಿದರು.

ಸನ್ಮಾನ: ಕಾರ್ಯಕ್ರಮದಲ್ಲಿ ಕೊರೊನಾ ಸೇನಾನಿಗಳನ್ನು ಸನ್ಮಾನಿಸಲಾಯಿತು.

ಗುಂಡ್ಲುಪೇಟೆ ಶಾಸಕ ಸಿ.ಎಸ್‌.ನಿರಂಜನಕುಮಾರ್‌, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಎಂ,ಅಶ್ವಿನಿ, ಉಪಾಧ್ಯಕ್ಷೆ ಶಶಿಕಲಾ, ಚುಡಾ ಅಧ್ಯಕ್ಷ ಪಿ.ಬಿ.ಶಾಂತಮೂರ್ತಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಶೋಭಾ, ಉಪಾಧ್ಯಕ್ಷ ರವೀಶ್‌, ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ, ಜಿಲ್ಲಾ ಪಂಚಾಯಿತಿ ಸಿಇಒ ಹರ್ಷಲ್ ಭೋಯರ್‌ ನಾರಾಯಣರಾವ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಕೆ.ಸುರೇಶ್‌, ನಗರಸಭೆ ಆಯುಕ್ತ ಎಂ.ರಾಜಣ್ಣ‌ ಮತ್ತಿತರರು ಇದ್ದರು.

LEAVE A REPLY

Please enter your comment!
Please enter your name here