ಸುಶಾಂತ್​ ಪ್ರಕರಣವನ್ನು ಸಿಬಿಐ ಕೈಗೆತ್ತಿಕೊಂಡ ಬೆನ್ನಲ್ಲೇ ದಿಶಾ ಕುರಿತ ಸ್ಫೋಟಕ ಮಾಹಿತಿ ಬಹಿರಂಗ!

0

 

ಬಾಲಿವುಡ್​ ನಟ ಸುಶಾಂತ್​ ಸಿಂಗ್​ ಸಾವಿನ ಪ್ರಕರಣದ ತನಿಖೆಯನ್ನು ಸಿಬಿಐ ಕೈಗೆತ್ತಿಕೊಂಡ ಬೆನ್ನಲ್ಲೇ ಸುಶಾಂತ್​ ಮಾಜಿ ಮ್ಯಾನೇಜರ್​ ದಿಶಾ ಸಾಲಿಯಾನ ಕುರಿತಾದ ಸ್ಫೋಟಕ ಮಾಹಿತಿಯೊಂದು ಹೊರಬಿದ್ದಿದೆ. ದಿಶಾ ಸತ್ತ ನಂತರವೂ ಆಕೆಯ ಮೊಬೈಲ್​ ಕೆಲವು ದಿನಗಳವರೆಗೆ ಕಾರ್ಯನಿರತವಾಗಿತ್ತು ಎಂದು ತಿಳಿದುಬಂದಿದೆ.

ಜೂನ್​ 8ರಂದು ನಿಗೂಢ ಸ್ಥಿತಿಯಲ್ಲಿ ದಿಶಾ ಶವ ಪತ್ತೆಯಾಗಿತ್ತು. ತಮ್ಮ ಫ್ಲ್ಯಾಟ್​ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಹೇಳಲಾಗಿದೆ. ಆದರೆ ದಿಶಾ ಸತ್ತ ವಾರದ ಬೆನ್ನಲ್ಲೇ ನಟ ಸುಶಾಂತ್​ ಸಾವಿಗೀಡಾಗಿದರು. ಹೀಗಾಗಿ ಎರಡು ಪ್ರಕರಣಗಳ ನಡುವೆ ಏನಾದರೂ ಸಂಬಂಧವಿದೆಯೇ ಎಂಬುದು ಸಹಜವಾಗೇ ಅನುಮಾನ ಹುಟ್ಟುಹಾಕಿದೆ. ಹೀಗಾಗಿ ಸುಶಾಂತ್​ ಸಾವಿನ ತನಿಖೆಯ ಜತೆಯಲ್ಲೇ ದಿಶಾ ಪ್ರಕರಣದ ಮೇಲೂ ಸಿಬಿಐ ಗಮನಹರಿಸಿದೆ.

ಸದ್ಯ ಮಾಹಿತಿ ಪ್ರಕಾರ ದಿಶಾ ಸತ್ತ ನಂತರವೂ ಆಕೆಯ ಫೋನ್​ ಒಂದು ವಾರಕ್ಕಿಂತ ಹೆಚ್ಚಿನ ಕಾಲದವರೆಗೂ ಕಾರ್ಯ ನಿರತವಾಗಿತ್ತೆಂದು ತಿಳಿದುಬಂದಿದೆ. ಜೂನ್​ 9 ಮತ್ತು ಜೂನ್​ 17ರ ನಡುವೆ ದಿಶಾ ಫೋನ್​ನಲ್ಲಿ ಅನೇಕ ಇಂಟರ್ನೆಟ್​ ಕರೆಗಳು ದಾಖಲಾಗಿವೆ. ಅಲ್ಲದೆ, ಇಂಟರ್ನೆಟ್​ ಸಹ ಬಳಸಲಾಗಿದೆ. ಆದಾಗ್ಯೂ ದಿಶಾ ಫೋನ್​ ಅನ್ನು ಯಾರು ಬಳಸಿದ್ದಾರೆ ಎಂಬುದು ಈ ಕ್ಷಣದವರೆಗೂ ಸ್ಪಷ್ಟವಾಗಿಲ್ಲ.

ಇನ್ನು ಪ್ರತ್ಯಕ್ಷದರ್ಶಿ ಹೇಳುವ ಪ್ರಕಾರ ದಿಶಾ ಸಾವಿಗೀಡಾದ ರಾತ್ರಿ ಸ್ಥಳಕ್ಕೆ ಆಗಮಿಸಿದ ಮುಂಬೈ ಪೊಲೀಸರು, ದಿಶಾ ಫೋನನ್ನು ವಶಕ್ಕೆ ಪಡೆಯಲಿಲ್ಲ ಎಂದಿದ್ದಾರೆ. ಇನ್ನೊಂದೆಡೆ ತನಿಖೆಯ ಶಿಷ್ಟಾಚಾರ ಪ್ರಕಾರ ದಿಶಾ ಮರಣ ನಂತರವೂ ಅವರ ಫೋನ್​ ಅನ್ನು ಮುಂಬೈ ಪೊಲೀಸರು ಸ್ವಿಚ್​ ಆಫ್​ ಮಾಡಲಿಲ್ಲ ಎನ್ನಲಾಗಿದೆ.

ಇದೇ ವೇಳೆ ನೆಟ್ಟಿಗರು ಆರೋಪಗಳ ಸುರಿಮಳೆಗೈಯುತ್ತಿದ್ದು, ದಿಶಾ ಸಾವಿನಲ್ಲಿ ಏನೋ ನಿಗೂಢತೆ ಇದೆ. ಇದು ಆತ್ಮಹತ್ಯೆಯಲ್ಲ. ಒಂದೇ ವಾರದ ಅಂತರದಲ್ಲಿ ಸುಶಾಂತ್​​ ಮತ್ತು ಮಾಜಿ ಮ್ಯಾನೇಜರ್​ ಮೃತಪಟ್ಟಿರುವುದರಿಂದ ಇಬ್ಬರ ಸಾವಿಗೂ ಏನೋ ಸಂಬಂಧವಿದೆ ಎಂದು ನೆಟ್ಟಿಗರು ಅನುಮಾನ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)

LEAVE A REPLY

Please enter your comment!
Please enter your name here