ಜಮ್ಮು-ಕಾಶ್ಮೀರದ ಬಾರಾಮುಲ್ಲಾ ಪ್ರದೇಶದ ಪಟ್ಟಾನ್ ನಲ್ಲಿ ಉಗ್ರರ ವಿರುದ್ಧ ಸುಮಾರು 12 ಗಂಟೆಗಳ ಎನ್ ಕೌಂಟರ್ ಕಾರ್ಯಾಚರಣೆ ನಡೆಸಿ ಹಿಜ್ಬುಲ್ ಮುಜಾಹಿದೀನ್ ಸಂಘಟನೆಯ ಮೂವರು ಉಗ್ರರನ್ನು ಹತ್ಯೆಗೈಯಲಾಗಿದ್ದು, ಘಟನೆಯಲ್ಲಿ ಸೇನಾ ಅಧಿಕಾರಿ ಸೇರಿದಂತೆ ಮೂವರು ಗಾಯಗೊಂಡಿರುವುದಾಗಿ ವರದಿ ತಿಳಿಸಿದೆ.
ಜಮ್ಮು-ಕಾಶ್ಮೀರ ಪೊಲೀಸ್, ಭಾರತೀಯ ಸೇನೆ ಜಂಟಿಯಾಗಿ ಎನ್ ಕೌಂಟರ್ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಉಗ್ರರು 12 ಮಂದಿಯನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ನಮಗೆ ಜನರ ರಕ್ಷಣೆ ಪ್ರಮುಖ ಆದ್ಯತೆಯಾಗಿತ್ತು. ಉತ್ತರ ಕಾಶ್ಮೀರದಲ್ಲಿ ಹಿಜ್ಬುಲ್ ಮುಜಾಹಿದೀನ್ ಉಗ್ರರು ತಮ್ಮ ಸಂಘಟನೆಯನ್ನು ಬಲಪಡಿಸಿಕೊಳ್ಳಲು ಯತ್ನಿಸುತ್ತಿರುವುದಾಗಿ ವರದಿ ತಿಳಿಸಿದೆ.
ಉತ್ತರ ಕಾಶ್ಮೀರ ವಲಯದ ಡೆಪ್ಯುಟಿ ಇನ್ಸ್ ಪೆಕ್ಟರ್ ಜನರಲ್ ಆಫ್ (ಡಿಐಜಿ) ಪೊಲೀಸ್ ಮಹಮ್ಮದ್ ಸುಲೈಮಾನ್ ಚೌಧರಿ ಅವರು, ಉಗ್ರರು ಅಡಗಿಕೊಂಡಿರುವ ಬಗ್ಗೆ ಮಾಹಿತಿ ಪಡೆದ ನಾವು ಬಾರಾಮುಲ್ಲಾ ಜಿಲ್ಲಾ ಪೊಲೀಸ್, ಸೇನೆ ಮತ್ತು ಸಿಆರ್ ಪಿಎಫ್ ಸ್ಥಳೀಯ ಯೂನಿಟ್ ಜತೆ ಸೇರಿ ಕಾರ್ಯಾಚರಣೆ ಆರಂಭಿಸಿದ್ದೇವು.
ರೆಸಿಡೆನ್ಶಿಯಲ್ ಕಾಂಪ್ಲೆಕ್ಸ್ ಒಳಗೆ ಉಗ್ರರು ಅಡಗಿಕೊಂಡಿದ್ದು, ಅಲ್ಲದೇ ಜನರನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದ್ದರು. ಅದಕ್ಕಾಗಿ ನಾವು ಬಿಲ್ಡಿಂಗ್ ಹಿಂಭಾಗದಲ್ಲಿ ದೊಡ್ಡ ರಂಧ್ರಕೊರೆದು ಉಗ್ರರನ್ನು ಹೆಡೆಮುರಿ ಕಟ್ಟುವ ಕೆಲಸಕ್ಕೆ ಕೈಹಾಕಿದ್ದೇವು. ಈ ಸಂದರ್ಭದಲ್ಲಿ ಉಗ್ರರು ಗುಂಡಿನ ದಾಳಿ ನಡೆಸಿದಾಗ, ಭದ್ರತಾ ಪಡೆ ಕೂಡಾ ಪ್ರತೀಕಾರವಾಗಿ ಗುಂಡಿನ ದಾಳಿ ನಡೆಸಿತ್ತು. ಕೊನೆಗೂ ಜನರನ್ನು ಸುರಕ್ಷಿತವಾಗಿ ರಕ್ಷಿಸಿ, ಮೂವರು ಉಗ್ರರನ್ನು ಹೊಡೆದುರುಳಿಸಲಾಗಿತ್ತು ಎಂದು ವಿವರಿಸಿದ್ದಾರೆ.
ಪಟ್ಟಾನ್ ಕಾರ್ಯಾಚರಣೆಯಲ್ಲಿ ಒಬ್ಬರು ಆರ್ಮಿಯ ಮೇಜರ್ ಹಾಗೂ ಇಬ್ಬರು ಅಧಿಕಾರಿಗಳು ಗಾಯಗೊಂಡಿದ್ದು, ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಂಡಿರುವುದಾಗಿ ವರದಿ ತಿಳಿಸಿದೆ.
ಸಾವನ್ನಪ್ಪಿದ್ದ ಮೂವರು ಉಗ್ರರ ಗುರುತು ಪತ್ತೆ ಹಚ್ಚಲಾಗಿದೆ. ರಾವತ್ ಪೋರಾದ ಶಫಾಕತ್ ಅಲಿ ಖಾನ್, ಡೆಲಿನಾ ಮತ್ತು ಬಾರಾಮುಲ್ಲಾ ನಗರದ ಹನಾನ್ ಬಿಲಾಲ್ ಸೋಫಿ ಎಂದು ಗುರುತಿಸಲಾಗಿದೆ. ಮೃತ ಉಗ್ರರ ಬಳಿ ಇದ್ದ ಎರಡು ಎಕೆ47 ರೈಫಲ್ಸ್, ನಾಲ್ಕು ಮ್ಯಾಗಜೈನ್ಸ್, ಒಂದು ಪಿಸ್ತೂಲ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.