ಸಾಮಾಜಿಕ ಕಾರ್ಯಕರ್ತ ಸ್ವಾಮಿ ಅಗ್ನಿವೇಶ್ ಅವರ ಸಾವು ಒಳ್ಳೆಯ ಸಂಗತಿ ಎನ್ನುವ ಮೂಲಕ ಸಿಬಿಐನ ಮಾಜಿ ಹೆಚ್ಚುವರಿ ನಿರ್ದೇಶಕ ಹಾಗೂ ನಿವೃತ್ತ ಐಪಿಎಸ್ ಅಧಿಕಾರಿ ಎಂ. ನಾಗೇಶ್ವರ ರಾವ್ ವಿವಾದ ಸೃಷ್ಟಿಸಿದ್ದಾರೆ.
ಸ್ವಾಮಿ ಅಗ್ನಿವೇಶ್ ನಿಧನದ ಕೆಲವು ಗಂಟೆಗಳ ಬಳಿಕ ಶುಕ್ರವಾರ ರಾತ್ರಿ ಎಂ. ನಾಗೇಶ್ವರ ರಾವ್ ಟ್ವಿಟ್ಟರ್ ಖಾತೆಯಲ್ಲಿ, ‘ಸ್ವಾಮಿ ಅಗ್ನಿವೇಶ್ ಒಬ್ಬ ಕಾವಿ ಬಟ್ಟೆಗಳನ್ನು ಧರಿಸಿದ್ದ ಹಿಂದೂ ವಿರೋಧಿ’ ಎಂದು ಟೀಕಿಸಿದ್ದರು. ಇದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.
‘ಒಳ್ಳೆಯ ನಿರ್ಗಮನ ಸ್ವಾಮಿ ಅಗ್ನಿವೇಶ್. ನೀವು ಕೇಸರಿ ಬಟ್ಟೆಯನ್ನು ಧರಿಸಿದ್ದ ಹಿಂದೂ ವಿರೋಧಿಯಾಗಿದ್ದಿರಿ. ನೀವು ಹಿಂದುತ್ವಕ್ಕೆ ಬಹಳ ಹಾನಿ ಮಾಡಿದ್ದೀರಿ. ನೀವು ತೆಲುಗು ಬ್ರಾಹ್ಮಣರಾಗಿ ಹುಟ್ಟಿದ್ದಿರಿ ಎನ್ನುವುದು ನನಗೆ ನಾಚಿಕೆ ಉಂಟುಮಾಡುತ್ತಿದೆ. ನೀವು ಕುರಿಯ ಬಟ್ಟೆಯಲ್ಲಿನ ಸಿಂಹ. ಇಷ್ಟು ಸುದೀರ್ಘ ಸಮಯ ಏಕೆ ಕಾದಿದ್ದಿ ಎಂದು ಯಮರಾಜನ ಬಗ್ಗೆ ನಾನು ಬೇಸರ ಹೊಂದಿದ್ದೇನೆ’ ಎಂದು ನಾಗೇಶ್ವರ್ ರಾವ್ ಹೇಳಿದ್ದರು.
ಸಿಬಿಐನಂತಹ ಉನ್ನತ ಸಂಸ್ಥೆಯ ಮುಖ್ಯಸ್ಥರಾಗಿದ್ದವರು ಈ ರೀತಿ ಒಬ್ಬ ವ್ಯಕ್ತಿಯನ್ನು ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ಟೀಕಿಸಿರುವುದು ಅವರ ವೃತ್ತಿ ಹಾಗೂ ಹಿಂದುತ್ವಕ್ಕೆ ಮಾಡುವ ಅವಮಾನ ಎಂದು ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಾಗೇಶ್ವರ್ ರಾವ್ ಅವರನ್ನು ಸಾಮಾಜಿಕ ಕಾರ್ಯಕರ್ತ ರಾಹುಲ್ ಈಶ್ವರ್, ‘ದ್ವೇಷ ವೈರಸ್’ ಎಂದು ಟೀಕಿಸಿದ್ದಾರೆ. ‘ನಮ್ಮ ನಂಬಿಕೆ ದೇಶವನ್ನು ದೇವರೇ ಕಾಪಾಡಲಿ. ಭಗವಾನ್ ಕೃಷ್ಣ ಹಿಂದೂ, ಹಿಂದೂಸ್ತಾನವನ್ನು ದ್ವೇಷ ವೈರಾಣುವಿನಿಂದ ರಕ್ಷಿಸಲಿ’ ಎಂದು ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ನಾಗೇಶ್ವರ್, ‘ಹಿಂದುತ್ವ ನಂಬಿಕೆಯಲ್ಲ, ಅದೊಂದು ಧರ್ಮ…’ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ‘ನಂಬಿಕೆ ಎನ್ನುವುದು ಕುರುಡು ವಿಶ್ವಾಸ ಮತ್ತು ಹಿಂದುತ್ವ ಅದಕ್ಕೆ ವಿರುದ್ಧವಾಗಿದೆ. ಅಧರ್ಮಿಕರನ್ನು ಸಾಯಿಸಲು ವಿಷ್ಣು 9 ಅವತಾರಗಳನ್ನು ಎತ್ತಿಬಂದಿದ್ದ. ಅದನ್ನು ನಾವು ಹಬ್ಬ ಎಂದು ಆಚರಿಸುತ್ತೇವೆ. ಈ ಹಬ್ಬಗಳೆಲ್ಲವೂ ದ್ವೇಷ ವೈರಾಣುಗಳೇ? ನೀವು ಸ್ವಾಮಿ ಅಗ್ನಿವೇಶ್ ಹಿಂಬಾಲಕರೇ?’ ಎಂದು ಪ್ರಶ್ನಿಸಿದ್ದಾರೆ.