ಹತ್ರಸ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದ ಪರವಾಗಿ ಕಾನೂನು ಹೋರಾಟವನ್ನು 2012ರ ನಿರ್ಭಯಾ ಪ್ರಕರಣದ ವಕೀಲೆ ಸೀಮಾ ಕುಶ್ವಾಹ ಅವರು ನಡೆಸಲಿದ್ದಾರೆ. ಗುರುವಾರ ಸೀಮಾ ಅವರು ಸಂತ್ರಸ್ತೆಯ ಕುಟುಂಬವನ್ನು ಭೇಟಿಯಾಗಲು ಯತ್ನಿಸಿದರೂ ಅವರನ್ನು ಪೊಲೀಸರು ತಡೆದಿದ್ದಾರೆ.
“ಕುಟುಂಬವನ್ನು ಭೇಟಿಯಾಗದೆ ನಾನು ವಾಪಸ್ ಹೋಗುವುದಿಲ್ಲ. ಅವರು ತಮ್ಮ ವಕೀಲೆಯಾಗುವಂತೆ ನನಗೆ ಮನವಿ ಮಾಡಿದ್ದಾರೆ ಆದರೆ ಇಲ್ಲಿನ ಆಡಳಿತ ನನಗೆ ಅವರನ್ನು ಭೇಟಿಯಾಗಲು ಅನುಮತಿಸುತ್ತಿಲ್ಲ,” ಎಂದು ಸೀಮಾ ಹೇಳಿದ್ದಾರೆ. ತಾನು ಸಂತ್ರಸ್ತೆಯ ಸಹೋದರನ ಜತೆ ಸಂಪರ್ಕದಲ್ಲಿರುವುದಾಗಿಯೂ ಅವರು ತಿಳಿಸಿದ್ದಾರೆ.
ನಿರ್ಭಯಾ ಪ್ರಕರಣದ ಎಲ್ಲಾ ನಾಲ್ಕು ಮಂದಿ ಅಪರಾಧಿಗಳನ್ನು ಈ ವರ್ಷದ ಮಾರ್ಚ್ ತಿಂಗಳಲ್ಲಿ ಗಲ್ಲಿಗೇರಿಸಲಾಗಿದ್ದನ್ನು ಇಲ್ಲಿ ಸ್ಮರಿಸಬಹುದು.