ಹೈಕೋರ್ಟ್ ಮಹತ್ವ ಆದೇಶ ನೀಡಿದ್ದು, ಉತ್ತರ ಕರ್ನಾಟಕ ಭಾಗದ ಪ್ರತ್ಯೇಕ ನಾಲ್ಕು ದಂತ ವೈದ್ಯಕೀಯ ಕಾಲೇಜುಗಳಿಗೆ ಬರೋಬ್ಬರಿ 8.20 ಕೋಟಿ ರೂಪಾಯಿ ದಂಡ ವಿಧಿಸಿದೆ.
ಮಾಪ್ ಅಪ್ ರೌಂಡ್ ಮುಗಿದ ನಂತರ ಖಾಲಿ ಉಳಿದ ಸರ್ಕಾರಿ ಕೋಟಾದಡಿಯ ದಂತ ವೈದ್ಯಕೀಯ ಸೀಟುಗಳಿಗೆ 82 ವಿದ್ಯಾರ್ಥಿಗಳನ್ನು ಅನಧಿಕೃತವಾಗಿ ದಾಖಲಿಸಿಕೊಂಡ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಿದೆ.
ಇನ್ನು ವಿವಾದಿತ 82 ಸೀಟುಗಳಿಗೆ ವಿದ್ಯಾರ್ಥಿಗಳ ಪ್ರವೇಶಾತಿಗೆ ಅನುಮೋದನೆ ನೀಡಲು ನಿರಾಕರಿಸಿ ರಾಜ್ಯ ಸರ್ಕಾರ ಮತ್ತು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ ಹೊರಡಿಸಿದ ಆದೇಶ ರದ್ದು ಕೋರಿ ಬೀದರ್ ಜಿಲ್ಲೆಯ ನೌಬಾದ್‌ನ ಎಸ್.ಬಿ.ಪಾಟೀಲ್ ದಂತ ಕಾಲೇಜು ಮತ್ತು ಆಸ್ಪತ್ರೆ, ಎಸ್.ಬಿ.ಪಾಟೀಲ್ ದಂತ ವಿಜ್ಞಾನಗಳ ಹಾಗೂ ಸಂಶೋಧನಾ ಸಂಸ್ಥೆ, ಕಲಬುರಗಿ ಜಿಲ್ಲೆಯ ಹುಮನಬಾದ್ ತಾಲೂಕಿನ ಹೈಕ ಅಭಿವೃದ್ಧಿ ಶಿಕ್ಷಣ ಟ್ರಸ್ಟ್‌ನ ದಂತ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆ, ಎಸ್.ನಿಜಲಿಂಗಪ್ಪ ದಂತ ವಿಜ್ಞಾನಗಳ ಮತ್ತು ಸಂಶೋಧನಾ ಸಂಸ್ಥೆಗಳು ಹಾಗೂ ಸೀಟು ಅನುಮೋದನೆ ಸಿಗದ 82 ವಿದ್ಯಾರ್ಥಿಗಳು ಹೈಕೋರ್ಟ್‌ಗೆ ಪ್ರತ್ಯೇಕ ತಕರಾರು ಅರ್ಜಿ ಸಲ್ಲಿಸಿದ್ದರು.
ಅರ್ಜಿಗಳ ವಿಚಾರಣೆ ನಡೆಸಿದ ಕಲಬುರಗಿ ಪೀಠದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಮತ್ತು ನ್ಯಾಯಮೂರ್ತಿ ಪಿ.ಕೃಷ್ಣ ಭಟ್ ಅವರಿದ್ದ ವಿಭಾಗೀಯ ನ್ಯಾಯಪೀಠ, ಈ ನಾಲ್ಕು ಸಂಸ್ಥೆಗಳು ಕೆಇಎ ನಡೆಸಿದ ಸಿಇಟಿಗೆ ಹಾಜರಾಗದ ಅಥವಾ ಕಾಮೆಡ್-ಕೆ ಪರೀಕ್ಷೆ ಹಾಜರಾದ ವಿದ್ಯಾರ್ಥಿಗಳನ್ನು ದಾಖಲಿಸಿಕೊಂಡಿವೆ. ಇದು ಕಾನೂನು ಬಾಹಿರ ಕ್ರಮ’ ಎಂದು ಅಭಿಪ್ರಾಯಪಟ್ಟಿದ್ದು, ಅವುಗಳಿಗೆ ದಂಡ ವಿಧಿಸಿದೆ.