ಹೊತ್ತಿ ಉರಿಯಿತು ಭಾರತಕ್ಕೆ ಬರುತ್ತಿದ್ದ ನೌಕೆ: ಭಯದಲ್ಲಿ ಕೇರಳ

0

ಭಾರತಕ್ಕೆ ತೈಲವನ್ನು ತರುತ್ತಿದ್ದ ಕುವೈತ್‌ನ ನೌಕೆಯು ಶ್ರೀಲಂಕಾದ ಪೂರ್ವ ಕರಾವಳಿ ಬಳಿ ನಿನ್ನೆ ಹೊತ್ತಿ ಉರಿದು ಭಾರಿ ಆತಂಕ ಸೃಷ್ಟಿಸಿದೆ.

ಇಂಡಿಯನ್ ಆಯಿಲ್ ಕಾರ್ಪೊರೇಷನ್‌ನ (ಐಒಸಿ) ಪನಾಮಾ ನೋಂದಣಿಯ ಆಯಿಲ್ ಟ್ಯಾಂಕರ್ ನ್ಯೂ ಡೈಮಂಡ್ 2,70,000 ಮೆಟ್ರಿಕ್ ಟನ್‌ನಷ್ಟು ಕಚ್ಚಾ ತೈಲವನ್ನು ಕುವೈತ್‌ನಿಂದ ಭಾರತಕ್ಕೆ ತರುತ್ತಿತ್ತು. ಈ ಸಂದರ್ಭದಲ್ಲಿ ಶ್ರೀಲಂಕಾದ ಪೂರ್ವ ಕರಾವಳಿ ಬಳಿ ಅವಘಡ ಸಂಭವಿಸಿದೆ.

ಒಂದು ವೇಳೆ ಸಮುದ್ರದಲ್ಲೇನಾದರೂ ತೈಲ ಸೋರಿಕೆಯಾಗಿದ್ದರೆ ಸುಮಾರು 600 ಕಿ.ಮೀ ಚದರದಷ್ಟು ಕರಾವಳಿ ಪ್ರದೇಶಕ್ಕೆ ಅಪಾಯ ಆಗುವ ಎಲ್ಲಾ ಸಾಧ್ಯತೆಗಳು ಇರುವ ಹಿನ್ನೆಲೆಯಲ್ಲಿ, ಆತಂಕದಲ್ಲಿ ಕೇರಳಿಗರು ಇದ್ದಾರೆ. ಪ್ರಾಥಮಿಕ ಅಧ್ಯಯನ ಪ್ರಕಾರ ಸಮುದ್ರಕ್ಕೆ ಸೋರಿಕೆಯಾದ ತೈಲವು ಶೀಘ್ರದಲ್ಲಿಯೇ ಕೇರಳ ತೀರಕ್ಕೆ ತಲುಪಲಿದೆ. ಈ ಹಿನ್ನೆಲೆಯಲ್ಲಿ ಕೇರಳದ ಕರಾವಳಿ ಭಾಗದಲ್ಲಿ ಅತ್ಯಂತ ಕಟ್ಟೆಚ್ಚರ ವಹಿಸಲಾಗಿದೆ.

ಭಾರಿ ಪ್ರಮಾಣದಲ್ಲಿ ತೈಲ ಸೋರಿಕೆಯಾಗಿದ್ದರೆ ರಾಜ್ಯದ ಮೀನುಗಾರಿಕೆ ವಲಯ ಹಾಗೂ ಪರಿಸರಕ್ಕೆ ಅಪಾರ ಹಾನಿಯಾಗಲಿದೆ. ತೈಲ ಸೋರಿಕೆ ಸಂಕಷ್ಟ ಸಂಭವಿಸಿದರೆ ಅದನ್ನು ಎದುರಿಸುವ ಯಾವುದೇ ವ್ಯವಸ್ಥೆ ಕೇರಳದಲ್ಲಿಲ್ಲ. ಇದು ಕೇರಳ ಸರ್ಕಾರವನ್ನು ಚಿಂತೆಗೇಡು ಮಾಡಿದೆ. ಇದೇ ಸಂಬಂಧವಾಗಿ ಭಾರತ ರಾಷ್ಟ್ರೀಯ ಸಾಗರ ಮಾಹಿತಿ ಸೇವೆಗಳ ಕೇಂದ್ರದ (ಐಎನ್‌ಸಿಒಐಎಸ್) ಜತೆ ಸಂಪರ್ಕ ಸಾಧಿಸಿರುವ ಸರ್ಕಾರ, ಘಟನೆಗೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿ ನೀಡುವಂತೆ ಕೋರಿದೆ.

ಘಟನೆ ನಡೆಯುತ್ತಿದ್ದಂತೆಯೇ. ಶ್ರೀಲಂಕಾ ನೌಕಾಪಡೆ ಬೆಂಕಿಯನ್ನು ನಂದಿಸಿ ಸಿಬ್ಬಂದಿಯನ್ನು ರಕ್ಷಿಸಿದೆ. ಕೆಲವು ಸಿಬ್ಬಂದಿ ನಾಪತ್ತೆಯಾಗಿದ್ದು, ಅವರ ಶೋಧನಾ ಕಾರ್ಯ ನಡೆದಿರುವುದಾಗಿ ತಿಳಿದುಬಂದಿದೆ.

 

LEAVE A REPLY

Please enter your comment!
Please enter your name here