ಹೊನ್ನಾವರ: ಕಡಲತೀರದಲ್ಲಿ ಅಭಿಯಾನದ ಧ್ವಜಾರೋಹಣ

0

‘₹ 8 ಕೋಟಿ ವೆಚ್ಚದಲ್ಲಿ ಪ್ರವಾಸೋದ್ಯಮ ಇಲಾಖೆಯು ಕಾಸರಕೋಡು ಕಡಲತೀರವನ್ನು ಅಭಿವೃದ್ಧಿ ಪಡಿಸುತ್ತಿರುವುದು ಸಂತಸದ ಸಂಗತಿ. ಮುಂದಿನ ದಿನದಲ್ಲಿ ಈ ಬೀಚ್ ರಾಜ್ಯಕ್ಕೆ ಮಾದರಿಯಾಗಲಿದೆ ಎನ್ನುವ ವಿಶ್ವಾಸವಿದೆ’ ಎಂದು ಶಾಸಕ ಸುನೀಲ ನಾಯ್ಕ ಹೇಳಿದರು.

ಕಾಸರಕೋಡು ಇಕೊ ಬೀಚ್ ಕಡಲತೀರ ರಕ್ಷಣೆಗೆ ಹಮ್ಮಿಕೊಳ್ಳಲಾಗಿರುವ ‘ಸೇವ್ ಮೈ ಬೀಚ್’ ಅಭಿಯಾನದ ಅಂಗವಾಗಿ ಶುಕ್ರವಾರ ಅವರು ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

‘ಜಿಲ್ಲೆಯ ಪ್ರವಾಸೋದ್ಯಮದ ಅಭಿವೃದ್ಧಿ ದೃಷ್ಟಿಯಿಂದ ಇಂತಹ ಸ್ಥಳಗಳು ಮುಂಬರುವ ದಿನಗಳಲ್ಲಿ ಪ್ರಮುಖ ಪಾತ್ರ ವಹಿಸಲಿವೆ’ ಎಂದು ಅಭಿಪ್ರಾಯಪಟ್ಟರು.

ಪ್ರವಾಸೋದ್ಯಮ ಇಲಾಖೆಯ ಪ್ರಭಾರ ಉಪ ನಿರ್ದೇಶಕ ಪುರುಷೋತ್ತಮ ಮಾತನಾಡಿ, ‘ಇಕೋ ಬೀಚ್ ಪ್ರತಿಷ್ಠಿತ ಬ್ಲೂ ಫ್ಲ್ಯಾಗ್ ಪ್ರಮಾಣ ಪತ್ರ ಪಡೆಯಲು ಒಂದು ತಿಂಗಳ ಕಾಲವಕಾಶವಿದೆ. ಕಡಲತೀರ ಉಳಿಸಿ ಎನ್ನುವ ಸಂದೇಶವುಳ್ಳ ಧ್ವಜಾರೋಹಣ ನಡೆಸಿರುವುದು ಪ್ರತಿಯೊಬ್ಬರು ಕಡಲತೀರ ರಕ್ಷಣೆಗೆ ತೋರುವ ಜವಾಬ್ದಾರಿಯ ಪ್ರತೀಕವಾಗಿದೆ. ನಮ್ಮ ಸುತ್ತಮುತ್ತಲಿನ ಪರಿಸರ, ಕಡಲಜೀವಿಗಳ ರಕ್ಷಣೆ ಮಾಡುವ ಉದ್ದೇಶವನ್ನು ಈ ಅಭಿಯಾನ ಹೊಂದಿದೆ’ ಎಂದು ಹೇಳಿದರು.

‘ಇದು ವಿದೇಶಿ ಪ್ರವಾಸಿಗರನ್ನು ಆಕರ್ಷಣೆ ಮಾಡುವುದಷ್ಟೇ ಅಲ್ಲದೇ ಪರಿಸರ ಸಂರಕ್ಷಣೆ ಮಾಡಲಿದೆ. ಮೊದಲ ಹಂತದ ಕಾರ್ಯಕ್ರಮ ಇದಾಗಿದ್ದು, ಮುಂದಿನ ದಿನಗಳಲ್ಲಿ ಸಂರಕ್ಷಣೆಗೆ ಹೊಸಹೊಸ ಕಾರ್ಯಕ್ರಮ ಆಯೋಜಿಸಲು ಉತ್ಸುಕರಾಗಿದ್ದೇವೆ’ ಎಂದರು.

ಈ ಸಂದರ್ಭದಲ್ಲಿ ಡಿ.ಎಫ್.ಒ ಗಣಪತಿ.ಕೆ, ಎ.ಸಿ.ಎಫ್ ಕೆ.ಟಿ. ಬೋರಯ್ಯ, ಆರ್.ಎಫ್.ಒ ಶರತ್ ಶೆಟ್ಟಿ, ಅರಣ್ಯ ಇಲಾಖೆಯ ಸಿಬ್ಬಂದಿ ಇದ್ದರು.

LEAVE A REPLY

Please enter your comment!
Please enter your name here