ಅಮ್ಮನಾದ ಮಯಂತಿ ಲ್ಯಾಂಗರ್.. ಐಪಿಎಲ್ ನಿರೂಪಣೆಯಿಂದ ಹೊರಕ್ಕೆ..

0

ಬೆಂಗಳೂರು: ಕ್ರೀಡಾ ವಲಯದ ಸ್ಟಾರ್ ನಿರೂಪಕಿ ಮಯಂತಿ ಲ್ಯಾಂಗರ್ ಈ ಭಾರಿಯ ಐಪಿಎಲ್‌ನಿಂದ ಹಿಂದೆ ಸರಿದಿದ್ದಾರೆ. ಈ ಕುರಿತು ಟೂರ್ನಿಯ ಪ್ರಸಾರ ಹಕ್ಕು ಹೊಂದಿರುವ ಸ್ಟಾರ್ ಸ್ಪೋರ್ಟ್ಸ್ ವಾಹಿನಿ ಟ್ವಿಟರ್‌ನಲ್ಲಿ ಖಚಿತಪಡಿಸಿದೆ. ಸೆಪ್ಟೆಂಬರ್ 19 ರಿಂದ ನವೆಂಬರ್ 10 ರವರೆಗೆ ಐಪಿಎಲ್ ಟೂರ್ನಿಯ ನಡೆಯಲಿದೆ. ಮಯಂತಿ ಲ್ಯಾಂಗರ್ ಈ ಬಾರಿ ಐಪಿಎಲ್‌ನಲ್ಲಿ ನಿರೂಪಣೆ ಮಾಡುವರೆ ಎಂದು ಟ್ವಿಟರ್‌ನಲ್ಲಿ ಒಬ್ಬರು ಪ್ರಶ್ನೆ ಕೇಳಿದ್ದಕ್ಕೆ ಸ್ಟಾರ್ ಸ್ಪೋಟ್ಸ್ ವಾಹಿನಿ ಈ ರೀತಿ ಪ್ರತಿಕ್ರಿಯೆ ನೀಡಿದೆ. ಬಳಿಕ ಮಯಂತಿ ಕೂಡ ಟ್ವೀಟ್ ಮಾಡಿದ್ದು, ಆರು ವಾರಗಳ ಹಿಂದೆ ಗಂಡು ಮಗುವಿಗೆ ಜನ್ಮ ನೀಡಿದ್ದು, ಈ ಬಾರಿಯ ಐಪಿಎಲ್‌ನಿಂದ ಹಿಂದೆ ಸರಿಯುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

 

ಪ್ರತಿಷ್ಠಿತ ಟೂರ್ನಿಗಳಿಗೆ ನಿರೂಪಣೆ ಮಾಡುವ ಮೂಲಕ ಹೆಸರು ವಾಸಿಯಾಗಿರುವ ಮಯಂತಿ ಲ್ಯಾಂಗರ್, ಈ ಬಾರಿ ಹಿಂದೆ ಸರಿದಿದ್ದಾರೆ. ಕರ್ನಾಟಕದ ಕ್ರಿಕೆಟಿಗ ಸ್ಟುವರ್ಟ್ ಬಿನ್ನಿ ಹಾಗೂ ಮಯಂತಿ ದಂಪತಿಗೆ ಗಂಡು ಮಗುವಿನ ಜನನವಾಗಿದೆ. ಬಿನ್ನಿ- ಮಯಂತಿ ದಂಪತಿ ಮಗುವಿನ ಫೋಟೋ ಸಮೇತ ಟ್ವೀಟ್ ಮಾಡಿದ್ದಾರೆ. ಸ್ಟಾರ್ ಸ್ಪೋರ್ಟ್ಸ್ ವಾಹಿನಿ ಈಗಾಗಲೇ ಪೂರ್ಣ ಪ್ರಮಾಣದ ಆಯಂಕರ್‌ಗಳ ತಂಡವನ್ನು ಪ್ರಕಟಿಸಿದೆ. ಸುರೆನ್ ಸುಂದರಮ್, ಕಿರಾ ನಾರಾಯಣನ್, ಸುಹೈಲ್ ಚಂದೋಕ್, ನಶ್‌ಪ್ರೀತ್ ಕೌರ್, ಸಂಜನಾ ಗಣೇಶನ್, ಜತಿನ್ ಸಪ್ರು, ತನ್ಯಾಪುರೂಹಿತ್, ಅನಂತ್ ತ್ಯಾಗಿ, ಧೀರಜ್ ಜುನೇಜಾ, ಭಾವ್ನಾ ಬಾಲಕೃಷ್ಣನ್ (ತಮಿಳು), ರೀನಾ ಡಿ ಸೋಜಾ, ಮಧು ಮೈಲಾಂಕೊಡಿ (ಕನ್ನಡ), ನೆಹಾ ಮಾಟ್ಚಾ (ತೆಲುಗು), ಅಂಜುಂ ಚೋಪ್ರಾ, ಲಿಸಾ ಸ್ಟೇಲೆಕರ್ ಹಾಗೂ ನೆರೊಲಿ ಮೆಡೋಸ್ ಟೂರ್ನಿಯಲ್ಲಿ ನಿರೂಪಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ಕ್ರೀಡಾ ನಿರೂಪಣೆಯಲ್ಲಿ ಸಾಕಷ್ಟು ಹೆಸರು ಮಾಡಿದ್ದ ಮಯಂತಿ ಲ್ಯಾಂಗರ್, ಐಸಿಸಿ, ಐಪಿಎಲ್ ಹಾಗೂ ಐಸಿಎಲ್ ಟೂರ್ನಿಗಳಿಗೆ ಕಾರ್ಯನಿರ್ವಹಿಸಿದ್ದರು.

 

13ನೇ ಐಪಿಎಲ್ ಟೂರ್ನಿ ಮಾರ್ಚ್ 29 ರಿಂದ ಮೇ 24ರವರೆಗೆ ನಿಗದಿಯಾಗಿತ್ತು. ಆದರೆ, ಕೋವಿಡ್ ಮಹಾಮಾರಿಯಿಂದಾಗಿ ಯುಎಇಗೆ ಸ್ಥಳಾಂತರಿಸಲಾಗಿದ್ದು, ಸೆ.19 ರಿಂದ ನ.10ರವರೆಗೆ 53 ದಿನಗಳ ಕಾಲ 60 ಪಂದ್ಯಗಳು ನಡೆಯಲಿವೆ. ಶನಿವಾರ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಎದುರಾಗಲಿವೆ.

LEAVE A REPLY

Please enter your comment!
Please enter your name here