ಆನ್‌ಲೈನ್‌ ತರಗತಿಗೆ ಸ್ಮಾರ್ಟ್ ಫೋನ್‌ ಕೊಡಿಸಿಲ್ಲವೆಂದು ಆತ್ಮಹತ್ಯೆಗೆ ಶರಣಾದ SSLC ವಿದ್ಯಾರ್ಥಿನಿ

0

ಚಾಮರಾಜನಗರ : ಆನ್‌ಲೈನ್‌ ತರಗತಿಗೆ ಹಾಜರಾಗಲು ಮನೆಯಲ್ಲಿ ಸ್ಮಾರ್ಟ್ ಫೋನ್‌ ಖರೀದಿ ಮಾಡಿ ಕೊಡಲಿಲ್ಲ ಎಂದು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ ಕ್ರಿಮಿನಾಶಕ ಸೇವನೆ ಮಾಡಿ ಆತ್ಮಹತ್ಯೆಗೆ ಶರಣಾದ ಘಟನೆ ತಾಲೂಕಿನ ಸಾಗಡೆ ಗ್ರಾಮದಲ್ಲಿ ನಡೆದಿದೆ.

ಮೃತ ವಿದ್ಯಾರ್ಥಿನಿ ಸಾಗಡೆ ಸರ್ಕಾರಿ ಪ್ರೌಢ ಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಹರ್ಷಿತಾ (15) 9ನೇ ತರಗತಿ ಉತ್ತೀರ್ಣಳಾಗಿ 10 ತರಗತಿಗೆ ದಾಖಲಾಗಿದ್ದಳು. ಕೊರೊನಾ ಕಾರಣದಿಂದಾಗಿ ಆನ್‌ಲೈನ್‌ ತರಗತಿಗಳು ನಡೆಯುತ್ತಿದ್ದು ನನ್ನ ಸಹಪಾಠಿಗಳು ಅವರ ಮೊಬೈಲ್‌ನಲ್ಲೇ ಆನ್‌ಲೈನ್‌ ತರಗತಿಗೆ ಹಾಜರಾಗುತ್ತಾರೆ, ನನಗೂ ಮೊಬೈಲ್‌ ಬೇಕು ಎಂದು ಮನೆಯಲ್ಲಿ ಒತ್ತಾಯ ಮಾಡಿದ್ದಳು.

ಹರ್ಷಿತಾಳ ತಂದೆ ವೃತ್ತಿಯಲ್ಲಿ ಟೈಲರ್‌ ಆಗಿದ್ದು ಆರ್ಥಿಕವಾಗಿ ಸಬಲರಾಗಿರಲಿಲ್ಲ. ಆದರೆ ಮಗಳು ಮೊಬೈಲ್‌ ಬೇಕು ಎಂದು ಹಠ ಮಾಡಿದ ಕಾರಣ ಮೊಬೈಲ್‌ ಖರೀದಿಸಿ ಕೊಡುವುದಾಗಿ ತಿಳಿಸಿದ್ದರು. ಆದರೆ ತಂದೆಯ ಮಾತನ್ನು ಕೇಳದ ಹರ್ಷಿತಾ ಬೆಳೆಗಳಿಗಾಗಿ ತಂದಿರಿಸಿದ್ದ ಕ್ರಿಮಿನಾಶಕವನ್ನು ಸೇವಿಸಿದ್ದಾಳೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಕ್ರಿಮಿನಾಶಕ ಸೇವಿಸಿ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಹರ್ಷಿತಾಳನ್ನು ಕೂಡಲೇ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿದ್ದು ಬಳಿಕ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ಕರೆದೊಯ್ಯುವಾಗ ಬಾಲಕಿ ಸಾವನ್ನಪ್ಪಿದ್ದಾಳೆ. ಈ ಬಗ್ಗೆ ತಂದೆ ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹರ್ಷಿತಾ ವಿದ್ಯಾಭ್ಯಾಸ ಮಾಡುತ್ತಿದ್ದ ಸಾಗಡೆ ಸರ್ಕಾರಿ ಪ್ರೌಢಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಗಜೇಂದ್ರ ಅವರು, ನಾವು ಯಾವುದೇ ಆನ್‌ಲೈನ್‌ ತರಗತಿಗಳನ್ನು ಮಾಡುತ್ತಿರಲಿಲ್ಲ. ಊರಿಗೆ ಹೋಗಿ ವಿದ್ಯಾರ್ಥಿಗಳನ್ನು ಒಂದೆಡೆಯಲ್ಲಿ ಸೇರಿಸಿ ಪಾಠ ಮಾಡುತ್ತಿದ್ದೆವು ಎಂದು ಸ್ಪಷ್ಟಪಡಿಸಿದ್ದಾರೆ.

LEAVE A REPLY

Please enter your comment!
Please enter your name here