ಇಂದಿನ ಐಕಾನ್ – ಬ್ರಹ್ಮಶ್ರೀ ನಾರಾಯಣಗುರುಗಳ ತತ್ವ ಬೋಧೆಗಳು.

0

ಇಂದಿನ ಐಕಾನ್ – ಬ್ರಹ್ಮಶ್ರೀ ನಾರಾಯಣಗುರುಗಳ ತತ್ವ ಬೋಧೆಗಳು.
ಇಂದು ಶ್ರೀ ನಾರಾಯಣ ಗುರುಗಳ ಜಯಂತಿ. ಎರಡು ಶತಮಾನವನ್ನು ತಮ್ಮ ತಪಸ್ಸಿನ ಶಕ್ತಿಯಿಂದ ಪ್ರಭಾವಿಸಿ, ಮುಂದಿನ ಹಲವಾರು ಶತಮಾನಗಳನ್ನು ತನ್ನ ತತ್ವಗಳ ಬೆಳಕಿನಲ್ಲಿ ಮುನ್ನಡೆಸುವ ಬ್ರಹ್ಮಶ್ರೀ ನಾರಾಯಣ ಗುರುಗಳು ಹಚ್ಚಿದ ಹಣತೆಯ ಬೆಳಕು ಇಂದಿಗೂ ದೆದೀಪ್ಯಮಾನ. ಅವರ ಬೋಧನೆ ಮತ್ತು ತತ್ವಗಳೇ ನಮ್ಮ ಇಂದಿನ ನಿಜವಾದ ಐಕಾನ್!
ಮೌಢ್ಯ ಮತ್ತು ಅಂಧಶ್ರದ್ಧೆ ಇವುಗಳಿಂದ ನಲುಗಿ ಹೋಗಿದ್ದ ಕೇರಳವನ್ನು ತಮ್ಮ ಸಾಮಾಜಿಕ ಪರಿವರ್ತನೆಯ ಮೂಲಕ ಹಿಡಿದು ಎತ್ತಿದ್ದು ಗುರುಗಳ ಸಾಧನೆ. ಜಾತಿ ಪದ್ಧತಿ, ಅಸ್ಪೃಶ್ಯತೆ ಮತ್ತು ಅಸಮಾನತೆಯಿಂದ ಬಸವಳಿದ ಕರಾವಳಿ ಕರ್ನಾಟಕದ ಈ ಭಾಗವನ್ನು ಗೆಲ್ಲಿಸಿದ್ದು ಇದೇ ಗುರುಗಳ ಸ್ಪರ್ಶ! ಜಾತಿಯ ಕಾರಣಕ್ಕೆ ಧ್ವನಿ ಕಳೆದುಕೊಂಡವರಿಗೆ ದೇವಾಲಯಗಳ ಪ್ರವೇಶವನ್ನು ನಿರಾಕರಿಸಿದಾಗ ಅವರೇ ಪೂಜಿಸುವ ಮತ್ತು ಎಲ್ಲಾ ಜಾತಿಯವರಿಗೆ ಮುಕ್ತ ಪ್ರವೇಶ ನೀಡುವ ನೂರಾರು ದೇಗುಲಗಳನ್ನು ನಿರ್ಮಿಸಿದ್ದು ಇದೇ ನಾರಾಯಣಗುರುಗಳು. ಕೆಳ ಜಾತಿಯವರಿಗೆ ಸಂಸ್ಕೃತ ಅಧ್ಯಯನ ನಿಷಿದ್ಧ ಎಂದು ನಂಬಿದ್ದ ಕಾಲದಲ್ಲಿ ಅದೇ ಭಾಷೆಯನ್ನು ಅಧ್ಯಯನ ಮಾಡಿ ಅದರಲ್ಲಿ ಹತ್ತಾರು ಗ್ರಂಥಗಳನ್ನು ರಚನೆ ಮಾಡಿದ್ದು ಇದೇ ಗುರುಗಳು. ಮಲಯಾಳಂ, ತಮಿಳು ಭಾಷೆಗಳಲ್ಲಿ ಕೂಡ ಅವರು ಅಸಂಖ್ಯಾತ ಕೃತಿಗಳನ್ನು ರಚಿಸಿದ್ದಾರೆ. ಅವರು ಹುಟ್ಟು ಹಾಕಿದ ಶಾಲೆಗಳು, ಗುರುಕುಲಗಳು, ಸಂಜೆ ಕಾಲೇಜುಗಳು ಇಂದು ಸಾವಿರಾರು ಜನರಿಗೆ ವಿದ್ಯೆಯ ಬೆಳಕನ್ನು ನೀಡಿವೆ.
ಮಹಾತ್ಮ ಗಾಂಧೀಜಿ ಅವರು ಸ್ವಾತಂತ್ರ್ಯ ಸಂಗ್ರಾಮದ ಪ್ರಮುಖ ಘಟ್ಟದಲ್ಲಿ ಗುರುಗಳನ್ನು ಹಲವು ಬಾರಿ ಭೇಟಿ ಮಾಡಿ ಚರ್ಚಿಸಿದ್ದರು. ತಮ್ಮ ‘ದಲಿತ ಚಳುವಳಿಗೆ’ ಸ್ಫೂರ್ತಿ ಕೊಟ್ಟದ್ದು ನಾರಾಯಣ ಗುರುಗಳು ಎಂದು ಮಹಾತ್ಮ ಗಾಂಧೀಜಿ ಹೇಳಿದ್ದಾರೆ. ಅದೇ ರೀತಿ ಆಚಾರ್ಯ ವಿನೋಬಾ ಭಾವೆ, ರಾಷ್ಟ್ರಕವಿ ರವೀಂದ್ರನಾಥ ಠಾಗೋರ್ ಮೊದಲಾದವರು ಗುರುಗಳನ್ನು ಭೇಟಿ ಮಾಡಿ ಅವರ ಪ್ರಭಾವಕ್ಕೆ ಒಳಗಾದನ್ನು ಸ್ಮರಿಸಿದ್ದಾರೆ. ಅವರ ತತ್ವ, ಆದರ್ಶ ಮತ್ತು ಬೋಧನೆಗಳು ಸಾರ್ವಕಾಲಿಕ ಸತ್ಯ ಎಂದು ನಾನು ನಂಬಿದ್ದೇನೆ. ಅದರಲ್ಲಿ ಕೆಲವನ್ನು ಮಾತ್ರ ಇಲ್ಲಿ ದಾಖಲೀಸಲು ನನಗೆ ಸಾಧ್ಯವಾಗಿದೆ.
೧) ಆತ್ಮೋದ್ಧಾರವು ಎಲ್ಲಾ ಜ್ಞಾನಕ್ಕಿಂತ ಮಿಗಿಲು. ಅದನ್ನು ಮೀರಿದ ತಪಸ್ಸು ಇಲ್ಲ.
೨) ವಿದ್ಯೆಯಿಂದ ಸ್ವತಂತ್ರರಾಗಿ
ಮತ್ತು ಸಂಘಟನೆಯಿಂದ ಬಲಯುತರಾಗಿರಿ.
೩) ಜಾತಿ ಯಾವುದಾದರೇನು? ಮನುಷ್ಯ ಒಳ್ಳೆಯವನಾದರೆ ಸಾಕು.
೪) ಮನುಷ್ಯ ಧರ್ಮ ಶ್ರೇಷ್ಠವಾದದ್ದು. ಸತ್ಕರ್ಮಗಳು ನಮ್ಮನ್ನು ಸನ್ಮಾರ್ಗದಲ್ಲಿ ಮುನ್ನಡೆಸುತ್ತವೆ.
೫) ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಮಾನವರೆಲ್ಲರಿಗೂ.
೬) ಯಾವುದನ್ನು ಕಳೆದುಕೊಂಡರೂ ಆತ್ಮವಿಶ್ವಾಸ ಕಳೆದುಕೊಳ್ಳಬಾರದು. ಯಾಕೆಂದರೆ ಆತ್ಮವಿಶ್ವಾಸ ನಮ್ಮೊಂದಿಗೆ ಇದ್ದರೆ ಎಲ್ಲವನ್ನೂ ಸಂಪಾದನೆ ಮಾಡಬಹುದು.
೭) ಅನುಕಂಪ ಇರುವವನು ಮಾತ್ರ ಜೀವಿ.
೮) ಬದುಕು ನಿಂತ ನೀರಾಗಬಾರದು. ನಿರಂತರ ಹರಿಯಬೇಕು.
೯) ಹುಟ್ಟಿನಿಂದ ಯಾರೂ ದೊಡ್ಡವರು ಆಗುವುದಿಲ್ಲ. ಒಳ್ಳೆಯ ಸಂಸ್ಕಾರಗಳಿಂದ ನಾವು ದೊಡ್ಡವರಾಗಬಹುದು.
೧೦) ಸಮಾಜಸೇವೆ ನಮ್ಮ ಋಣದ ಹೊರೆಯನ್ನು ಹಗುರ ಮಾಡುವ ದಾರಿ. ನಾವು ಉಪಕಾರ ಮಾಡುತ್ತೇವೆ ಎಂಬ ಭ್ರಮೆ ಸರಿ ಅಲ್ಲ!
೧೧) ಮದ್ಯಸೇವನೆ ವಿಷ. ಅದು ಸರ್ವನಾಶ ಮಾಡುತ್ತದೆ.
೧೨) ತನ್ನ ಕೆಲಸ ಕಾರ್ಯಗಳು ಎಲ್ಲರ ಹಿತಕ್ಕಾಗಿ ಇರಲಿ.
೧೩) ಧಾರ್ಮಿಕತೆ ವಾದಿಸಲು ಅಲ್ಲ. ಜಯಿಸಲು ಕೂಡ ಅಲ್ಲ. ತಿಳಿದು,ತಿಳಿಸಲು.
೧೪) ಜ್ಞಾನ ಮಾತ್ರ ಎಲ್ಲಾ ಕಡೆ ಪ್ರಕಾಶಿಸುತ್ತದೆ. ಆದ್ದರಿಂದ ಜ್ಞಾನ ಸಂಪಾದನೆ ನಮ್ಮ ಕರ್ತವ್ಯ ಆಗಿರಲಿ.
೧೫) ಅನ್ಯರನ್ನು ತನಗಿಂತ ಬೇರೆಯವರು ಎಂದು ತಿಳಿಯದಿರುವುದು ಅದ್ವೈತದ ಮೂಲ ಮಂತ್ರ.
೧೬) ಬಾಲ್ಯ ವಿವಾಹವನ್ನು ವಿರೋಧಿಸಿ ಮತ್ತು ವಿಧವಾ ವಿವಾಹವನ್ನು ಪ್ರೋತ್ಸಾಹಿಸಿ.
೧೭) ಪರಂಪರೆ ನಮ್ಮ ಗತ ಕಾಲದ ಸಂಚಯ. ಆ ಪರಂಪರೆ ಒಂದು ಜಾತಿಗೆ ಸೀಮಿತ ಆಗಬಾರದು. ಮನುಷ್ಯ ಜಾತಿಯ ಪರಂಪರೆಯ ಬಗ್ಗೆ ಮಾತ್ರ ನಾವು ಯೋಚಿಸಬೇಕು.
೧೮) ದೇಹವೆಂಬ ಬಂಧನದಿಂದ ನಮ್ಮನ್ನು ಬಿಡಿಸುವುದು ನಿಜವಾದ ತಪಸ್ಸು.
೧೯) ಆಡಂಬರದ ಮದುವೆ, ಸಮಾರಂಭ ಮಾಡುವುದನ್ನು ನಿಲ್ಲಿಸಿ.
೨೦) ಮಡಿ ದೇವರನ್ನು ಪೂಜಿಸುವುದು ನಮಗೆ ಅಸಾಧ್ಯವಾದರೆ ಮೈಲಿಗೆ ದೇವರನ್ನು ಪೂಜೆ ಮಾಡೋಣ.
🙏ಬ್ರಹ್ಮಶ್ರೀ ನಾರಾಯಣಗುರು ಅವರ ತತ್ವಗಳು ನಮ್ಮನ್ನು ಕತ್ತಲೆಯಿಂದ ಬೆಳಕಿನ ಕಡೆಗೆ ಮುನ್ನಡೆಸಲೀ.
☑ ಬರಹ – ರಾಜೇಂದ್ರ ಭಟ್ ಕೆ.

LEAVE A REPLY

Please enter your comment!
Please enter your name here