ಉತ್ತರ ಪ್ರದೇಶ ಸರ್ಕಾರ ಮಹಿಳೆಯರಿಗೆ ರಕ್ಷಣೆ ಒದಗಿಸಲು ಬದ್ಧವಾಗಿದೆ: ಸಿಎಂ ಯೋಗಿ ಆದಿತ್ಯನಾಥ್

0

ಮಹಿಳೆಯರಿಗೆ ರಕ್ಷಣೆ ಒದಗಿಸಲು ಉತ್ತರ ಪ್ರದೇಶ ಸರ್ಕಾರ ಬದ್ಧವಾಗಿದೆ ಎಂದಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು, ಮಹಿಳೆಯರಿಗೆ ಹಾನಿ ಮಾಡುವ ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ನೀಡಲಾಗುವುದು ಮತ್ತು ಭವಿಷ್ಯದಲ್ಲಿ ಅದು ನಿದರ್ಶನವಾಗಲಿದೆ ಎಂದು ಶುಕ್ರವಾರ ಹೇಳಿದ್ದಾರೆ.

ಹಾತ್ರಾಸ್‌ ದಲಿತ ಯುವತಿ ಅತ್ಯಾಚಾರ ಮತ್ತು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರವ್ಯಾಪಿ ಆಕ್ರೋಶ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಯೋಗಿ ಆದಿತ್ಯನಾಥ್‌ ಟ್ವೀಟ್‌ ಮಾಡಿದ್ದು, ‘ಉತ್ತರ ಪ್ರದೇಶದಲ್ಲಿ ತಾಯಂದಿರು ಮತ್ತು ಹೆಣ್ಣುಮಕ್ಕಳಿಗೆ ಹಾನಿ ಮಾಡುವ ಬಗ್ಗೆ ಯೋಚಿಸುವವರ ವಿನಾಶ ಖಚಿತವಾಗಿದೆ. ಭವಿಷ್ಯದಲ್ಲಿ ನಿದರ್ಶನ ಆಗಲಿರುವಂತಹ ಶಿಕ್ಷೆಯನ್ನು ಅವರು ಅನುಭವಿಸುತ್ತಾರೆ ಎಂದು ಎಚ್ಚರಿಸಿದ್ದಾರೆ.

ಎಲ್ಲಾ ತಾಯಂದಿರು ಮತ್ತು ಸಹೋದರಿಯರ ಸುರಕ್ಷತೆಗೆ ಹಾಗೂ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ. ಇದು ನಾನು ನೀಡುತ್ತಿರುವ ಭರವಸೆ ಎಂದು ಆದಿತ್ಯನಾಥ್‌ ತಿಳಿಸಿದ್ದಾರೆ.

ಸೆಪ್ಟೆಂಬರ್ 14ರಂದು ದಲಿತ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಚಿತ್ರಹಿಂಸೆ ನೀಡಲಾಗಿತ್ತು. 19 ವರ್ಷದ ಯುವತಿ ದೆಹಲಿಯಲ್ಲಿ ಮಂಗಳವಾರ ಮೃತಪಟ್ಟಿದ್ದರು. ಮೂಳೆ ಮುರಿತ ಮತ್ತು ನಾಲಿಗೆಯು ತುಂಡಾಗಿದ್ದ ಯುವತಿ ಅತ್ಯಂತ ಗಂಭೀರ ಸ್ಥಿತಿಯಲ್ಲಿದ್ದರು.

ಮೃತಪಟ್ಟ ಯುವತಿಯ ಅಂತ್ಯಕ್ರಿಯೆಯನ್ನು ಉತ್ತರ ಪ್ರದೇಶ ಪೊಲೀಸರು ನಡುರಾತ್ರಿಯಲ್ಲೇ ಮಾಡಿ ಮುಗಿಸಿದ್ದರು. ಅಂತ್ಯಕ್ರಿಯೆಗೆ ತೆರಳಲು ತಮಗೂ ಅವಕಾಶ ನೀಡಿರಲಿಲ್ಲ ಎಂದು ಸಂತ್ರಸ್ತೆಯ ಕುಟುಂಬ ಸದಸ್ಯರು ಆರೋಪಿಸಿದ್ದರು. ಈ ಘಟನೆಯು ದೇಶದಾದ್ಯಂತ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

LEAVE A REPLY

Please enter your comment!
Please enter your name here