ಕೊರೊನಾ ವೈರಸ್ ಸಂಕಷ್ಟ: ಯಡಿಯೂರಪ್ಪ ಸೇರಿ ಏಳು ಸಿಎಂ ಜತೆ ಮೋದಿ ಚರ್ಚೆ

0

ಸೆಪ್ಟೆಂಬರ್ 22: ದೇಶದಲ್ಲಿನ ಕೊರೊನಾ ವೈರಸ್ ಪಿಡುಗಿನ ಸನ್ನಿವೇಶದ ಬಗ್ಗೆ ಪರಾಮರ್ಶೆ ನಡೆಸಲು ಪ್ರಧಾನಿ ನರೇಂದ್ರ ಮೋದಿ ಬುಧವಾರ ಉನ್ನತ ಮಟ್ಟದ ಆನ್‌ಲೈನ್ ಸಭೆ ನಡೆಸಲಿದ್ದಾರೆ.

ಕೊರೊನಾ ವೈರಸ್ ಪ್ರಕರಣಗಳು ಅತ್ಯಧಿಕ ಮಟ್ಟದಲ್ಲಿರುವ ಏಳು ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಸಚಿವರು ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಕರ್ನಾಟಕ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸೇರಿದಂತೆ ಏಳು ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಮೋದಿ ಚರ್ಚಿಸಲಿದ್ದಾರೆ.

‘ಕೋವಿಡ್ 19 ಸಮಸ್ಯೆ ತೀವ್ರವಾಗಿರುವ ಏಳು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳು ಮತ್ತು ಆರೋಗ್ಯ ಸಚಿವರ ಜತೆ ಬುಧವಾರ ಸ್ಥಿತಿಗತಿಗಳ ಪರಾಮರ್ಶೆ ನಡೆಸಲಿದ್ದಾರೆ. ವೈರಸ್ ಹರಡುತ್ತಿರುವ ಸ್ಥಿತಿಯನ್ನು ನಿಭಾಯಿಸುವ ಮತ್ತು ಪ್ರತಿಕ್ರಿಯಾತ್ಮಕ ಸಿದ್ಧತೆಗಳ ಬಗ್ಗೆ ಮಾತುಕತೆ ನಡೆಸಲಿದ್ದಾರೆ’ ಎಂದು ಸರ್ಕಾರದ ಹೇಳಿಕೆ ತಿಳಿಸಿದೆ.

ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ಉತ್ತರ ಪ್ರದೇಶ, ತಮಿಳುನಾಡು, ದೆಹಲಿ, ಪಂಜಾಬ್ ರಾಜ್ಯಗಳಲ್ಲಿ ವೈರಸ್ ಪ್ರಕರಣಗಳು ಅತ್ಯಧಿಕ ಮಟ್ಟದಲ್ಲಿವೆ. ದೇಶದ ಒಟ್ಟು ಕೊರೊನಾ ವೈರಸ್ ಪ್ರಕರಣಗಳಲ್ಲಿ ಶೇ 63ರಷ್ಟು ಪ್ರಕರಣಗಳು ಈ ಏಳು ರಾಜ್ಯಗಳಲ್ಲಿಯೇ ವರದಿಯಾಗಿದೆ.

ಆಸ್ಪತ್ರೆಗಳಲ್ಲಿ ಸೂಕ್ತ ಪ್ರಮಾಣದಲ್ಲಿ ಆಕ್ಸಿಜನ್ ಲಭ್ಯವಿರುವ ಬಗ್ಗೆ ಮತ್ತು ಪರಿಸ್ಥಿತಿ ನಿರ್ವಹಣೆಗೆ ಬದ್ಧರಾದ ಕೋವಿಡ್ 19 ಆರೋಗ್ಯ ಕಾಳಜಿ ಸೌಲಭ್ಯಗಳನ್ನು ಖಾತರಿಪಡಿಸಿಕೊಳ್ಳಲು ಉನ್ನತ ಮಟ್ಟದ ಸಭೆಯಲ್ಲಿ ಚರ್ಚಿಸಲಾಗುತ್ತದೆ. ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಸಹಾಯಕ್ಕಾಗಿ ಬಹು ವಿಭಾಗದ ತಂಡಗಳನ್ನು ಕೇಂದ್ರ ಸರ್ಕಾರ ನಿರಂತರವಾಗಿ ನಿಯೋಜಿಸುತ್ತಿದೆ. ವೀಕ್ಷಣೆ, ಪರೀಕ್ಷೆ ಹಾಗೂ ಕೋವಿಡ್ ಪ್ರಕರಣಗಳ ಪರಿಣಾಮಕಾರಿ ನಿರ್ವಹಣೆಯಂತಹ ಕಾರ್ಯಗಳಿಗೆ ನೆರವು ನೀಡಲಾಗುತ್ತಿದೆ. ಸಮಯಕ್ಕೆ ಸರಿಯಾಗಿ ರೋಗ ಪತ್ತೆ ಮಾಡುವುದಕ್ಕೆ ಸಂಬಂಧಿಸಿದ ಸವಾಲುಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ಸಹ ಸ್ಥಳೀಯ ಅಧಿಕಾರಿಗಳಿಗೆ ಕೇಂದ್ರ ತಂಡ ಮಾರ್ಗದರ್ಶನ ನೀಡುತ್ತಿದೆ ಎಂದು ಹೇಳಿಕೆ ತಿಳಿಸಿದೆ.

LEAVE A REPLY

Please enter your comment!
Please enter your name here