ಗಿಲ್ ಬ್ಯಾಟಿಂಗ್ ಕಣ್ಣಿಗೆ ಆನಂದ: ಮಾರ್ಗನ್

0

ಭಾರತದ ಯುವ ಬ್ಯಾಟ್ಸ್‌ಮನ್ ಶುಭಮನ್ ಗಿಲ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿರುವ ಇಂಗ್ಲೆಂಡ್ ತಂಡದ ನಾಯಕ ಏಯನ್ ಮಾರ್ಗನ್ ‘ಗಿಲ್ ಬ್ಯಾಟಿಂಗ್ ಆಸ್ವಾದಿಸುವುದು ಕಣ್ಣಿಗೆ ಆನಂದ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಶೇಖ್ ಜೈಯದ್ ಕ್ರೀಡಾಂಗಣದಲ್ಲಿ ಶನಿವಾರ ರಾತ್ರಿ ನಡೆದ ಪಂದ್ಯದಲ್ಲಿ ಶುಭಮನ್ ಗಿಲ್ (ಔಟಾಗದೆ 70; 62 ಎ, 5 ಬೌಂ, 2 ಸಿ) ಅವರ ಅಮೋಘ ಅರ್ಧಶತಕದ ನೆರವಿನಿಂದ ಕೋಲ್ಕತ್ತ ನೈಟ್ ರೈಡರ್ಸ್ ತಂಡ ಸನ್‌ರೈಸರ್ಸ್ ಹೈದರಾಬಾದ್ ಎದುರು ಏಳು ವಿಕೆಟ್‌ಗಳಿಂದ ಜಯ ಗಳಿಸಿತು.

ಮೊದಲ ಜಯದ ಕನಸು ಹೊತ್ತು ಎರಡೂ ತಂಡಗಳು ಕಣಕ್ಕೆ ಇಳಿದಿದ್ದವು. ಟಾಸ್ ಗೆದ್ದ ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಮನೀಷ್ ಪಾಂಡೆ (51; 38 ಎಸೆತ; 3 ಬೌಂಡರಿ, 2 ಸಿಕ್ಸರ್), ಡೇವಿಡ್ ವಾರ್ನರ್ (36; 30 ಎಸೆತ) ಮತ್ತು ವೃದ್ಧಿಮಾನ್ ಸಹಾ (30; 31 ಎ) ಅವರ ಉತ್ತಮ ಬ್ಯಾಟಿಂಗ್ ನೆರವಿನಿಂದ ತಂಡ 4 ವಿಕೆಟ್‌ಗಳಿಗೆ 142 ರನ್ ಗಳಿಸಿತು.

ಸಾಧಾರಣ ಗುರಿ ಬೆನ್ನತ್ತಿದ ಕೋಲ್ಕತ್ತ ಆರು ರನ್ ಗಳಿಸುವಷ್ಟರಲ್ಲಿ ಸುನಿಲ್ ನಾರಾಯಣ್ ವಿಕೆಟ್ ಕಳೆದುಕೊಂಡರೂ ಶುಭಮನ್ ಗಿಲ್ ಮತ್ತು ನಿತೀಶ್ ರಾಣಾ ಉತ್ತಮ ಜೊತೆಯಾಟವಾಡಿದರು. 10 ಎಸೆತಗಳ ಅಂತರದಲ್ಲಿ ರಾಣಾ ಮತ್ತು ನಾಯಕ ದಿನೇಶ್ ಕಾರ್ತಿಕ್ ವಿಕೆಟ್ ಕಳೆದುಕೊಂಡಾಗ ಕೋಲ್ಕತ್ತ ಪಾಳಯದಲ್ಲಿ ಆತಂಕ ಮೂಡಿತು. ಆದರೆ ಗಿಲ್ ಜೊತೆಗೂಡಿದ ಏಯಾನ್ ಮಾರ್ಗನ್ ನಾಲ್ಕನೇ ವಿಕೆಟ್‌ಗೆ 92 ರನ್‌ ಸೇರಿಸಿ ಸುಲಭ ಜಯ ತಂದುಕೊಟ್ಟರು.

‘ಶುಭಮನ್ ಬಗ್ಗೆ ಹೆಚ್ಚಿನದೇನನ್ನೂ ಹೇಳಬೇಕಾಗಿಲ್ಲ. ಸೊಗಸಾಗಿ ಬ್ಯಾಟ್‌ ಬೀಸುವ ಅವರು ಕಲಿಯಲು ಹಂಬಲ ಇರುವ ಆಟಗಾರ ಎಂಬುದು ಮೇಲ್ನೋಟಕ್ಕೆ ತಿಳಿಯುತ್ತದೆ. ತಂಡಕ್ಕೆ ಅವರೊಬ್ಬ ಉಪಯುಕ್ತ ಬ್ಯಾಟ್ಸ್‌ಮನ್‌’ ಎಂದು ಮೋರ್ಗನ್ ಹೇಳಿದರು.

LEAVE A REPLY

Please enter your comment!
Please enter your name here