ಡಿಕೆಶಿ ನಿವಾಸದ ಮೇಲಿನ ಸಿಬಿಐ ದಾಳಿಯಲ್ಲಿ ಬಿಜೆಪಿಯ ಕೈವಾಡವಿಲ್ಲ – ಈರಣ್ಣ ಕದಾಡಿ

0

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಿವಾಸದ ಮೇಲಿನ ಸಿಬಿಐ ದಾಳಿಯಲ್ಲಿ ಬಿಜೆಪಿಯ ಪಾತ್ರವಿಲ್ಲ. ನಮ್ಮ ಸರ್ಕಾರ ಅಥವಾ ಪಕ್ಷ ಸಂವಿಧಾನಾತ್ಮಕ ಸಂಸ್ಥೆಗಳ ದುರ್ಬಳಕೆ ಮಾಡಿಕೊಂಡಿಲ್ಲ ಎಂದು ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಬಿಐ ಹಾಗು ಇಡಿಯವರು ಈ ಹಿಂದೆಯೇ ಡಿ.ಕೆ. ಶಿವಕುಮಾರ್ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿದ್ದರು. ಅದರ ಮುಂದುವರೆದ ಭಾಗವಾಗಿ ಈಗ ಮತ್ತೆ ದಾಳಿ ನಡೆಸಿದ್ದಾರೆ. ಸಿಬಿಐ ನವರು, ಏಕಾಏಕಿ ದಾಳಿ ನಡೆಸಲ್ಲ. ಅವರು ಆರು ತಿಂಗಳ ಕಾಲ ಸಮಗ್ರ ತನಿಖೆ ನಡೆಸಿ, ಅನುಮಾನ ಬಂದರೆ ದಾಳಿ ನಡೆಸುತ್ತಾರೆ ಎಂದು ಹೇಳಿದರು.

ಕೇವಲ ಡಿಕೆಶಿ ಒಬ್ಬರೇ ಅಲ್ಲ. ಆರ್ಥಿಕ ಅಪರಾಧ ಯಾರೇ ಮಾಡಿದರೂ ಸಿಬಿಐ, ಇಡಿ ದಾಳಿ ನಡೆಸುತ್ತವೆ. ಕಾಂಗ್ರೆಸ್ಸಿನವರನ್ನು ಈ ವಿಚಾರದಲ್ಲಿ ಗುರಿ ಮಾಡಲಾಗುತ್ತಿದೆ ಎಂಬುದು ಸುಳ್ಳು. ದಾಳಿ ಮಾಡಿರುವುದನ್ನೇ ಅನುಕಂಪ ಮಾಡಿಕೊಳ್ಳಲು ಕಾಂಗ್ರೆಸ್‌ನವರು ಹೊರಟಿದ್ದಾರೆ ಎಂದು ಟೀಕಿಸಿದರು.

ಯಾರೇ ಅಕ್ರಮ ಆಸ್ತಿ ಮಾಡಿದ್ದರೂ ಮುಚ್ಚಿಡಲು ಸಾಧ್ಯವಿಲ್ಲ. ಸೂಕ್ತ ದಾಖಲೆಗಳಿದ್ದರೆ ಸಿಬಿಐನವರು ಮಾಜಿ ಸಿದ್ದರಾಮಯ್ಯ ಅವರ ಮೇಲೂ ದಾಳಿ ನಡೆಸುತ್ತಾರೆ. ಸಿದ್ದರಾಮಯ್ಯನವರ ದಾಖಲೆ ಬೇಕಲ್ಲ. ಹೀಗಾಗಿ ದಾಖಲೆ ಸಿಕ್ಕವರ ಮನೆ ಮೇಲೆ ದಾಳಿ ನಡೆದಿದೆ ಎಂದು ಹೇಳಿದರು.

ಸಿಬಿಐ ದಾಳಿ ವಿಷಯದಲ್ಲಿ ರಾಜಕೀಯ ಬೆರೆಸುವುದು ಸರಿಯಲ್ಲ. ದಾಳಿ ಮಾಡಲು ಬಿಜೆಪಿಯ ಯಾರೊಬ್ಬರೂ ಹೇಳಿಲ್ಲ. ಈ ವಿಷಯದಲ್ಲಿ ಕಾಂಗ್ರೆಸ್ ರಾಜಕೀಯ ಮಾಡಿ, ಅನುಕಂಪ ಗಿಟ್ಟಿಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಟೀಕಿಸಿದರು.

LEAVE A REPLY

Please enter your comment!
Please enter your name here