‘ಡ್ರಗ್ಸ್​ ಮುಕ್ತ ಕರ್ನಾಟಕ ನಮ್ಮ ಗುರಿ’ – ಡಿಜಿ-ಐಜಿಪಿ ಪ್ರವೀಣ್ ಸೂದ್

0

ಸದ್ಯದಲ್ಲೇ ಡ್ರಗ್ಸ್​ ಮುಕ್ತ ಕರ್ನಾಟಕವನ್ನು ಮಾಡಲಾಗುವುದು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ ಸೂದ್ ತಿಳಿಸಿದ್ದಾರೆ. ಇಂದು ನಗರದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಪ್ರವೀಣ್​ ಸೂದ್​ ಅವರು, ಬೆಂಗಳೂರು ಸಿಟಿ ಸೇರಿದಂತೆ ಆಯಾ ವಲಯವಾರು ಸಾಕಷ್ಟು ಕ್ರಮ ಕೈಗೊಳ್ಳಲಾಗಿದೆ. ಈ ಕುರಿತು ಈಗಾಗಲೇ ಹಲವೆಡೆ ದಾಳಿ ನಡೆಸಿ ಡ್ರಗ್ಸ್ ಸೀಜ್ ಮಾಡಲಾಗಿದೆ. ಇನ್ನು ಹೆಚ್ಚಿನ ಕ್ರಮ ಕೈಗೊಳ್ಳುವಂತೆ ಐಜಿಪಿಗಳಿಗೆ ಹಾಗೂ ಆಯಾ ಜಿಲ್ಲಾ ಎಸ್​​ಪಿಗಳಿಗೆ ಸೂಚನೆ ನೀಡಿದ್ದೇನೆ. ಡ್ರಗ್ ಮಾಫಿಯಾ ಬಗ್ಗೆ ಕಾರ್ಯಾಚರಣೆ ನಡೆಯುತ್ತಿದೆ. ನಡೆಯುತ್ತಲೇ ಇರುತ್ತದೆ ಎಂದರು.

ಮಹಾರಾಷ್ಟ್ರಕ್ಕೆ, ಆಂಧ್ರಕ್ಕೆ ಜಿಲ್ಲೆಗಳು ಹೊಂದಿಕೊಂಡ ಜಿಲ್ಲೆಗಳಲ್ಲಿ ಮಾದಕ ವಸ್ತು ಸಾಗಾಟ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಪ್ರವೀಣ್ ಸೂದ್​​ ಅವರು, ಯಾವುದೇ ಜಿಲ್ಲೆ ಯಾವುದೇ ರಾಜ್ಯದ ಗಡಿಗೆ ಹೊಂದಿಕೊಂಡಿದ್ದರೂ ಸಮಸ್ಯೆ ಇಲ್ಲ. ಗಡಿ ಜಿಲ್ಲೆಗಳಲ್ಲಿ ಡ್ರಗ್ ಒಳಗೆ ಬರದಂತೆ ಹೇಗೆ ತಡೆಯಬೇಕು? ಹೇಗೆ ಹತೋಟಿಗೆ ತರಬೇಕು? ಎಂಬುದರ ಬಗ್ಗೆ ಚರ್ಚೆ ನಡೆಸಲಾಗಿದೆ. ರಾಜ್ಯವನ್ನು ಡ್ರಗ್ಸ್​ನಿಂದ ಮುಕ್ತ ಮಾಡಲಾಗುವುದು ಎಂದು ಭರವಸೆ ನೀಡಿದರು. ಪೊಲೀಸ್ ಕಾರ್ಯಾಚರಣೆಗಳ ಬಗ್ಗೆ ತಮಗೆ ಶೀಘ್ರದಲ್ಲೇ ಫಲಿತಾಂಶ ಸಿಗಲಿದೆ. ಡ್ರಗ್ಸ್ ಪತ್ತೆ ಹಚ್ಚುವುದು, ತಡೆಗಟ್ಟುವ ಕೆಲಸ ಮಾಡುತ್ತಲೇ ಇದ್ದೇವೆ. ಡ್ರಗ್ಸ್ ಮುಕ್ತ ರಾಜ್ಯ ಮಾಡಲು ತೀರ್ಮಾನಿಸಲಾಗಿದೆ. ರಾಜ್ಯದಿಂದ ಆದಷ್ಟು ಬೇಗ ಡ್ರಗ್ಸ್ ಅನ್ನು ಹೊರ ಹಾಕಲಿದ್ದೇವೆ ಎಂದು ತಿಳಿಸಿದರು.

ಹೀಗೆ ಮುಂದುವರಿದ ಪ್ರವೀಣ್​ ಸೂದ್​ ಅವರು, ಕೊರೋನಾ ಜೊತೆ ಪೊಲೀಸ್ ಕೆಲಸವೂ ನಡೆಯಬೇಕಿದೆ. ಶೇ.99 ಸಾಮಾನ್ಯ ಪೊಲೀಸ್ ಕೆಲಸ ನಡೆಯುತ್ತಿದೆ. ಕೆಲವು ಆಡಳಿತಾತ್ಮಕ ವಿಚಾರ, ನೇಮಕಾತಿ, ಬಡ್ತಿ, ಕ್ವಾಟ್ರ್ಟರ್ಸ, ಪೊಲೀಸ್ ಸ್ಟೇಷನ್, ಕಾನೂನು ಮತ್ತು ಸುವ್ಯವಸ್ಥೆ, ಅಪರಾಧ ತಡೆಗಟ್ಟುವ ಕುರಿತು ಚರ್ಚೆ ನಡೆಸಲಾಗಿದೆ. ಮುಂದೆ ಹೊಸದಾಗಿ ಕೈಗೊಳ್ಳಬೇಕಿರುವ ಕ್ರಮಗಳ ಕುರಿತು ಇಂದಿನ ಸಭೆಯಲ್ಲಿ ಚರ್ಚಿಸಲಾಗಿದೆ ಎಂದರು.

ಮೂರ್ನಾಲ್ಕು ತಿಂಗಳಲ್ಲಿ ನೇಮಕಾತಿ ಪ್ರಕ್ರಿಯೆ ಮುಗಿಯಲಿದೆ. ಪೊಲೀಸರ ಕಾರ್ಯಕ್ರಮಗಳಿಗೆ ಸಮುದಾಯ ಭವನ ನಿರ್ಮಿಸಲು ಕೂಡ ಚರ್ಚಿಸಲಾಗಿದೆ. ಬೆಂಗಳೂರಿನಲ್ಲಿ ದೂರು ನೀಡಲು ಇರುವ 112 ಸಂಖ್ಯೆಯನ್ನು ರಾಜ್ಯಾದ್ಯಂತ ವಿಸ್ತರಿಸುವ ಸಾರ್ವಜನಿಕರಿಗೆ ಅನುಕೂಲ ಮಾಡುವ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ. ಪ್ರತಿಯೊಬ್ಬರಿಗೆ ವಾರದ ರಜೆ ನೀಡಲು ಸೂಚಿಸಲಾಗಿದೆ ಎಂದು ಹೇಳಿದರು.

ಈಗ ಕೊರೋನಾ ಇರುವುದರಿಂದ ಸಿಬ್ಬಂದಿಗೆ ಬೇರೆ ಕಾಯಿಲೆಗಳಿದ್ದರೆ ಅವರಿಗೆ ಮುಕ್ತವಾಗಿ ರಜೆ ನೀಡಲು ನಿರ್ದೇಶನ ನೀಡಲಾಗಿದೆ. ಉಳಿದವರು ಕೆಲಸ ಮಾಡಬೇಕಾಗುತ್ತದೆ. ಕೊರೋನಾಗೆ ಹೆದರಿದರೆ ಪ್ರಯೋಜನವಿಲ್ಲ. ಕೊರೊನಾ ಈಗ ರಸ್ತೆ ರಸ್ತೆಯಲ್ಲಿ ಅಲ್ಲ, ಮನೆ ಮನೆಗೂ ಬಂದಿದೆ. ಆದರೆ, ಎಚ್ಚರಿಕೆ ವಹಿಸಿಕೊಂಡು ಕೆಲಸ ಮಾಡುವುದು ಅನಿವಾರ್ಯವಾಗಿದೆ ಎಂದರು.

ಈ ಸಂದರ್ಭದಲ್ಲಿ ಬೆಳಗಾವಿ ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ, ವಿಜಯಪುರ ಎಸ್ಪಿ ಅನುಪಮ ಅಗ್ರವಾಲ, ಎಎಸ್ಪಿ ಡಾ. ರಾಮ ಲಕ್ಷ್ಮಣ ಅರಸಿದ್ಧಿ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here