ದಿನದಿಂದ ದಿನಕ್ಕೆ ಉಬ್ಬಿದ ಹೊಟ್ಟೆ: ಭಾರಿ ನೋವೆಂದು ಆಸ್ಪತ್ರೆಗೆ ಹೋದ ಮಹಿಳೆಗೆ ಕಾದಿತ್ತು ಶಾಕ್​!

0

ಆರೋಗ್ಯಕ್ಕಿಂತ ಭಾಗ್ಯ ಮತ್ತೊಂದಿಲ್ಲ ಎಂಬ ಮಾತನ್ನಾಡಿದ ಮಹಿಳೆ ತಾನು ಅನುಭವಿಸಿದ ಯಾತನೆಯನ್ನು ವಿವರಿಸಿದ್ದಾರೆ. ಇದ್ದಕ್ಕಿದ್ದಂತೆ ದೇಹದ ತೂಕ ಹೆಚ್ಚಾಗಿ ಉಸಿರಾಡಲು ಕಷ್ಟ ಪಡುವಂತಹ ಸ್ಥಿತಿ ಎದುರಿಸಿದ 52 ವರ್ಷದ ಮಹಿಳೆಯೊಬ್ಬಳು ಚಿಕಿತ್ಸಾ ನಂತರ ಸಹಜ ಸ್ಥಿತಿಗೆ ಬಂದ ದೇಹದ ತೂಕದಿಂದ ನಿಟ್ಟುಸಿರು ಬಿಟ್ಟಿದ್ದಾರೆ.

ತುಂಬಾ ಉಬ್ಬಿದ ಹೊಟ್ಟೆಯಿಂದ ನೋವು ತಾಳಲಾರದೇ ಆಸ್ಪತ್ರೆಗೆ ದಾಖಲಾದ ಮಹಿಳೆಯ ಹೊಟ್ಟೆಯಿಂದ ಬರೊಬ್ಬರಿ 50 ಕೆಜಿ ತೂಕದ ಅಂಡಾಶಯ ಗಡ್ಡೆಯನ್ನು ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿಯಾಗಿ ಹೊರತೆಗೆದಿದ್ದಾರೆ. ಹೊರ ತೆಗೆದ ಗಡ್ಡೆಯು ಆಕೆಯ ನೈಜ ದೇಹ ಗಾತ್ರದಷ್ಟೇ ತೂಕವಿದೆ. 56 ಕೆಜಿ ತೂಕವಿದ್ದ ಮಹಿಳೆಯ ಹೊಟ್ಟೆಯಲ್ಲಿ 50 ಕೆಜಿ ತೂಕದ ಗಡ್ಡೆ ಸೇರಿ ಆಕೆ 106 ಕೆಜಿ ತೂಗುತ್ತಿದ್ದಳು.

 ಆಪರೇಷನ್​ ಯಶಸ್ವಿಯಾಗಿದ್ದು, ಆಗಸ್ಟ್​ 22ರ ಗಣೇಶ್​ ಹಬ್ಬದಂದೇ ಡಿಸ್ಚಾರ್ಜ್​ ಆಗುತ್ತಿದ್ದಾರೆ. ಕಾರಣಾಂತರಗಳಿಂದ ಮಹಿಳೆಯ ಹೆಸರನ್ನು ಬಹಿರಂಗಪಡಿಸಿಲ್ಲ. ಸುಮಾರು 3.5 ಗಂಟೆಗಳ ಕಾಲ ನಡೆದ ಸರ್ಜರಿಯಲ್ಲಿ 50 ಕೆಜಿಯ ಗಡ್ಡೆಯನ್ನು ದೆಹಲಿ ಇಂದ್ರಪ್ರಸ್ಥ ಅಪೋಲೊ ಆಸ್ಪತ್ರೆ ವೈದ್ಯರು ಹೊರತೆಗೆದಿದ್ದಾರೆ.

ಇದುವರೆಗೂ ವಿಶ್ವದಲ್ಲೇ ಹೊರತೆಗೆಯಲಾದ ಅತಿ ದೊಡ್ಡ ಅಂಡಾಶಯ ಗಡ್ಡೆ ಎಂದು ತಜ್ಞ ವೈದ್ಯರ ತಂಡ ಹೇಳಿದೆ. ಈ ಹಿಂದೆ ತಮಿಳುನಾಡಿನ ಕೊಯಮತ್ತೂರು ಮೂಲದ ಮಹಿಳೆಯ ಹೊಟ್ಟೆಯಿಂದ 34 ಕೆಜಿ ತೂಕದ ಗಡ್ಡೆಯನ್ನು ಹೊರತೆಗೆಯಲಾಗಿತ್ತು. 2017ರಲ್ಲಿ ಆಪರೇಷನ್​ ನಡೆದಿತ್ತು.

ಕಳೆದ ಕೆಲವು ತಿಂಗಳಲ್ಲಿ ಅತಿವೇಗವಾಗಿ ಮಹಿಳೆಯ ದೇಹದ ತೂಕ ಹೆಚ್ಚಾಗ ತೊಡಗಿತು. ಇದರಿಂದ ಆಕೆಗೆ ಸರಿಯಾಗಿ ಉಸಿರಾಡಲು ಆಗುತ್ತಿರಲಿಲ್ಲ. ಅಲ್ಲದೆ, ಕಿಬ್ಬೊಟ್ಟೆಯಲ್ಲಿ ನೋವು ಕಾಣಿಸಿಕೊಂಡಿತು. ಇದರಿಂದ ನಡೆದಾಡಲು ಸಹ ಸಾಧ್ಯವಾಗುತ್ತಿರಲಿಲ್ಲ. ಯಾವಾಗ ಇನ್ನಷ್ಟು ದೇಹ ತೂಕ ಹೆಚ್ಚಾಯಿತೋ ತಕ್ಷಣ ಮಹಿಳೆ ವೈದ್ಯರನ್ನು ಸಂಪರ್ಕಸಿದಳು. ಆಗ ಸ್ಥಳೀಯ ವೈದ್ಯರು ಇಂದ್ರಪ್ರಸ್ಥ ಅಪೋಲೋ ಆಸ್ಪತ್ರೆಗೆ ಶಿಫಾರಸು ಮಾಡಿದರು.

ಬಳಿಕ ಇಂದ್ರಪ್ರಸ್ಥ ಅಪೋಲೋ ಆಸ್ಪತ್ರೆಯಲ್ಲಿ ಮಹಿಳೆಗೆ ಆಪರೇಷನ್​ ನಡೆಯಿತು. ಗಡ್ಡೆಯನ್ನು ಯಶಸ್ವಿಯಾಗಿ ಹೊರತೆಗೆಯಲಾಗಿದ್ದು, ಮಹಿಳೆಯ ಚೇತರಿಸಿಕೊಳ್ಳುತ್ತಿದ್ದಾರೆ. ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ.

LEAVE A REPLY

Please enter your comment!
Please enter your name here