ನಾಲ್ವರು ಶಿಕ್ಷಕರಿಗೆ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ

0

ಗ್ರಾಮೀಣ ಭಾಗದ ಸರಕಾರಿ ಶಾಲೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ ತಾಲೂಕಿನ ನಾಲ್ಕು ಜನ ಶಿಕ್ಷಕ-ಶಿಕ್ಷಕಿಯರು ಜಿಲ್ಲಾ ಮಟ್ಟದ ಪ್ರಶಸ್ತಿಗೆ ಆಯ್ಕೆಗೊಂಡಿದ್ದಾರೆ.

ರಾಯಚೂರು ಜಿಲ್ಲೆಯ ಜಂಬಲದಿನ್ನಿ ರಂಗಮಂದಿರದಲ್ಲಿ ಸೆ.7ರಂದು ನಡೆಯಲಿರುವ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಮಸರಕಲ್‌ ಗ್ರಾಮದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ ಅನ್ನಪೂರ್ಣ ಮನೋಹರ ಗ್ರಾಮೀಣ ಭಾಗದಲ್ಲಿ 27 ವರ್ಷ ಸೇವೆ ಸಲ್ಲಿಸಿದ್ದಾರೆ.

1993ರಲ್ಲಿ ಬಿ.ಗಣೇಕಲ್‌ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 5 ವರ್ಷ ಸೇವೆ. 1998ರಿಂದ ಮಸರಕಲ್‌ ಸರಕಾರಿ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. 2011ರಲ್ಲಿ ತಾಲೂಕು ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇನ್ನು ಕರಿಮರಡಿ ತಾಂಡಾದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕಿ ಕವಿತಾ ಪರಮೇಶ್ವರ ತುಂಬರಗುದ್ದಿ 11 ವರ್ಷ ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸಿದ್ದು, ಇದೀಗ ಜಿಲ್ಲಾ ಮಟ್ಟದ ಶಿಕ್ಷಕರ ಪ್ರಶಸ್ತಿಗೆ ಭಾಜನರಾಗಿದ್ದಾರೆ. 2010ರಲ್ಲೇ ಸೇವೆಗೆ ಸೇರಿದ್ದು, 2019ರಲ್ಲಿ ಜನವರಿ ಗಣರಾಜ್ಯೋತ್ಸವೆಂದು ಗ್ರಾಮಸ್ಥರು ಉತ್ತಮ ಶಿಕ್ಷಕಿ ಎಂದು ಸನ್ಮಾನಿಸಿದ್ದಾರೆ.

ಗಡ್ಡಿ ತಾಂಡಾ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕಿ ವಿಜಯಾ ಲಕ್ಷಟ್ಟಿ ಕಳೆದ 13 ವರ್ಷಗಳಿಂದ ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸಿದ್ದು, ಇದೀಗ ಜಿಲ್ಲಾ ಮಟ್ಟದ ಶಿಕ್ಷಕರ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. 2014ರಲ್ಲಿ ಕಳಸ ಪ್ರತಿಷ್ಠಾನ ರಾಯಚೂರು ವತಿಯಿಂದ ಜಿಲ್ಲಾ ಶಿಕ್ಷಕ ರತ್ನ ಪ್ರಶಸ್ತಿ ಪಡೆದಿದ್ದಾರೆ.

ಇನ್ನು ಗಾಣಧಾಳ ಸರಕಾರಿ ಪ್ರೌಢಶಾಲೆಯಲ್ಲಿ 12ವರ್ಷ ಸೇವೆ ಸಲ್ಲಿಸಿದ ಹಿಂದಿ ಶಿಕ್ಷಕ ಗುಲಾಂನಬೀ ಜಿಲ್ಲಾ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. 2013-14ರಲ್ಲಿ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆಯಲ್ಲಿ ಪ್ರಶಸ್ತಿ ಬಂದಿದೆ. ರಾಜ್ಯಮಟ್ಟದ ಪ್ರೌಢ ಶಾಲಾ ಹಿಂದಿ ಶಿಕ್ಷಕರ ಸಂಘದಿಂದ ಎರಡು ಬಾರಿ ಪ್ರಶಸ್ತಿ ಲಭಿಸಿದೆ. ತಾಲೂಕಿನ ನಾಲ್ಕು ಜನ ಶಿಕ್ಷಕರಿಗೆ ಜಿಲ್ಲಾಮಟ್ಟದ ಪ್ರಶಸ್ತಿ ಲಭಿಸಿದ್ದು, ಸಂತಸವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್‌. ಇಂದಿರಾ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here