ಬಾಲ್ಯದ ಇಬ್ಬರು ಕ್ರಿಕೆಟ್ ಹೀರೋಗಳ ಹೆಸರು ತಿಳಿಸಿದ ಸಚಿನ್

0

ಸಚಿನ್ ತೆಂಡೂಲ್ಕರ್ ನಿವೃತ್ತರಾದ ಬಳಿಕವೂ ದೇಶದ ಅನೇಕರಿಗೆ ಕ್ರಿಕೆಟ್ ಹೀರೋ ಮತ್ತು ಸ್ಫೂರ್ತಿ. ಮಾಸ್ಟರ್ ಬ್ಲಾಸ್ಟರ್ ತಮ್ಮ ಬಾಲ್ಯದ ದಿನಗಳ ಇಬ್ಬರು ಕ್ರಿಕೆಟ್ ಹೀರೋಗಳ ಬಗ್ಗೆ ಹೇಳಿಕೊಂಡಿದ್ದಾರೆ.

ಭಾರತದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಮತ್ತು ವೆಸ್ಟ್ ಇಂಡೀಸ್‌ ಕ್ರಿಕೆಟ್‌ನ ದಂತಕಥೆ ಸರ್ ವಿವಿಯನ್ ರಿಚರ್ಡ್ಸ್ ತಾವು ಬೆಳೆಯುವ ಹಂತದಲ್ಲಿ ತಮ್ಮ ಹೀರೋಗಳಾಗಿದ್ದರು ಎಂದು ಸಚಿನ್ ತಿಳಿಸಿದ್ದಾರೆ. ಗವಾಸ್ಕರ್ ಹಾಗೂ ರಿಚರ್ಡ್ಸ್ ಇಬ್ಬರಿಂದಲೂ ತಾವು ಹೇಗೆ ಪ್ರೇರಣೆ ಪಡೆದುಕೊಂಡಿದ್ದೆಂದು ವಿವರಿಸಿರುವ ಸಚಿನ್, ಅವರನ್ನು ನೋಡುತ್ತಾ ಬೆಳೆಯುವಾಗ ತಮ್ಮಲ್ಲಿಯೂ ಭಾರತ ಕ್ರಿಕೆಟ್ ತಂಡಕ್ಕೆ ಆಡಬೇಕೆಂಬ ಆಸೆ ಮೂಡಿತ್ತು ಎಂದು ತಿಳಿಸಿದ್ದಾರೆ. ಮೊದಲ ಬಾರಿ ಕ್ರಿಕೆಟ್ ಆಡಿದ ಸಂದರ್ಭದಿಂದಲೂ ಅವರಿಗೆ ದೇಶಕ್ಕಾಗಿ ಆಡುವ ಹಂಬಲ ಉಮಟಾಗಿತ್ತಂತೆ.

‘ನಾನು ಕ್ರಿಕೆಟ್ ಆಡುತ್ತಿದ್ದಾಗ ಅಥವಾ ಚಿಕ್ಕ ವಯಸ್ಸಿನಲ್ಲಿದ್ದಾಗ ನನಗೆ ಕ್ರಿಕೆಟರ್ ಆಗಬೇಕು ಮತ್ತು ದೇಶಕ್ಕೆ ಆಡಬೇಕೆಂಬ ಆಸೆ ಮೂಡಿತ್ತು. ನನಗೆ ಇಬ್ಬರು ಹೀರೋಗಳಿದ್ದರು. ಅವರಲ್ಲಿ ಒಬ್ಬರು ನಮ್ಮವರೇ ಆದ ಸುನಿಲ್ ಗವಾಸ್ಕರ್. ಅವರು ಅನೇಕ ವರ್ಷಗಳ ಕಾಲ ಭಾರತಕ್ಕೆ ಆಡಿದ್ದರು. ಅವರೊಂದಿಗೆ ವೆಸ್ಟ್ ಇಂಡೀಸ್‌ನ ವಿವ್ ರಿಚರ್ಡ್ಸ್ ಕೂಡ ನನ್ನ ಬ್ಯಾಟಿಂಗ್ ಹೀರೋ’ ಎಂದು ತಿಳಿಸಿದ್ದಾರೆ.

ಕ್ರಿಕೆಟ್‌ನಾಚೆಗೆ ತಮಗೆ ಅತ್ಯಂತ ದೊಡ್ಡ ಸ್ಫೂರ್ತಿಯೆಂದರೆ ತಂದೆ ರಮೇಶ್ ತೆಂಡೂಲ್ಕರ್ ಎಂದು ತಿಳಿಸಿದ್ದಾರೆ. ತಂದೆಯೊಂದಿಗೆ ಕಳೆದ ಕ್ಷಣಗಳನ್ನು ನೆನಪಿಸಿಕೊಂಡಿರುವ ಅವರು, ಅವರು ಜೀವನದಲ್ಲಿ ಎಷ್ಟು ಶಾಂತ ಮತ್ತು ಸಂಯೋಜಿತ ಹೀರೋ ಎಂದು ತಿಳಿಸಿದ್ದಾರೆ.

‘ತಂದೆ ಅತ್ಯಂತ ಉತ್ತಮ ಸ್ವಭಾವ ಹೊಂದಿದ್ದರು. ಅವರಂತೆ ಆಗುವುದು ನನ್ನ ಕನಸಾಗಿತ್ತು. ನನ್ನ ಜೀವನದ ಹೀರೋ ಎಂದರೆ ಅದು ನನ್ನ ತಂದೆ ಎಂದು ಹೇಳುತ್ತೇನೆ’ ಎಂದಿದ್ದಾರೆ.

LEAVE A REPLY

Please enter your comment!
Please enter your name here