ಬಿಹಾರ ಚುನಾವಣೆ ಹೊಸ್ತಿಲಿನಲ್ಲೇ ಎನ್ ಡಿಎ ತೊರೆದ ಎಲ್ ಜೆಪಿ

0

ಬಿಹಾರ ವಿಧಾನಸಭಾ ಚುನಾವಣೆ ಹೊಸ್ತಿಲಿನಲ್ಲೇ ಲೋಕ ಜನಶಕ್ತಿ ಪಕ್ಷವು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ(NDA) ಮೈತ್ರಿಕೂಟವನ್ನು ತೊರೆದಿದೆ. ಜೆಡಿಯು ಮುಖ್ಯಸ್ಥ ಹಾಗೂ ಮುಖ್ಯಮಂತ್ರಿ ನಿತೀಶ್ ಕುಮಾರ್ ಮುಂದಾಳತ್ವದಲ್ಲಿ ಚುನಾವಣೆ ಎದುರಿಸಲು ಎಲ್ ಜೆಪಿ ವಿರೋಧ ವ್ಯಕ್ತಪಡಿಸಿದೆ ಎಂದು ಹೇಳಲಾಗುತ್ತಿದೆ.

ಭಾನುವಾರ ಲೋಕ ಜನಶಕ್ತಿ ಪಕ್ಷದ ಮುಖ್ಯಸ್ಥ ಚಿರಾಗ್ ಪಾಸ್ವಾನ್ ನೇತೃತ್ವದಲ್ಲಿ ಶಾಸಕಾಂಗ ಮಂಡಳಿ ಸಭೆ ನಡೆಸಲಾಯಿತು. ಈ ವೇಳೆ ಬಿಜೆಪಿ ಸಹಭಾಗಿತ್ವದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮುಂದಾಳತ್ವದಲ್ಲಿ ಚುನಾವಣೆ ಎದುರಿಸಲು ಪಕ್ಷದ ಶಾಸಕರು ಒಲವು ವ್ಯಕ್ತಪಡಿಸಿದ್ದರು.

ಬಿಹಾರ ಚುನಾವಣೆಗೆ ಎನ್ ಡಿಎ ಮೈತ್ರಿಕೂಟದಲ್ಲಿ ಸೀಟು ಹಂಚಿಕೆ ಈಗಾಗಲೇ ಪೂರ್ಣಗೊಂಡಿದೆ. ಅದಕ್ಕೂ ಮೊದಲೇ ಮುಖ್ಯಮಂತ್ರಿ ನಿತೀಶ್ ಕುಮಾರ್ ಮುಂದಾಳತ್ವದಲ್ಲೇ ಬಿಹಾರ ವಿಧಾನಸಭಾ ಚುನಾವಣೆ ಎದುರಿಸಲಾಗುತ್ತದೆ ಎಂಬುದನ್ನು ಸ್ವತಃ ಪ್ರಧಾನಮಂತ್ರಿ ನರೇಂದ್ರ ಮೋದಿಯವರೇ ಸ್ಪಷ್ಟವಾಗಿ ಹೇಳಿದ್ದರು.

ನಿತೀಶ್ ಕುಮಾರ್ ಮುಂದಾಳತ್ವಕ್ಕೆ ವಿರೋಧ:

ಬಿಹಾರ ವಿಧಾನಸಭೆಯ 243 ಕ್ಷೇತ್ರಗಳ ಪೈಕಿ ಜೆಡಿಯು 122 ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದು, 121 ಕ್ಷೇತ್ರಗಳು ಬಿಜೆಪಿ ಅಭ್ಯರ್ಥಿಗಳಿಗೆ ಬಿಟ್ಟು ಕೊಡುವುದಕ್ಕೆ ಎನ್ ಡಿಎ ಮಿತ್ರಪಕ್ಷಗಳು ಒಪ್ಪಂದ ಮಾಡಿಕೊಂಡಿವೆ ಎಂದು ತಿಳಿದು ಬಂದಿದೆ. ಇನ್ನೊಂದು ಕಡೆಯಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದಲ್ಲಿ ಚುನಾವಣೆ ಎದುರಿಸುವುದಕ್ಕೆ ಲೋಕ ಜನಶಕ್ತಿ ಪಕ್ಷವು ಆರಂಭದಿಂದಲೂ ವಿರೋಧ ವ್ಯಕ್ತಪಡಿಸುತ್ತಲೇ ಬಂದಿತ್ತು.

ಕಳೆದ ಗುರುವಾರ ನವದೆಹಲಿಯಲ್ಲಿ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರ ಜೊತೆಗೆ ಎಲ್ ಜೆಪಿ ಮುಖ್ಯಸ್ಥ ಚಿರಾಗ್ ಪಾಸ್ವಾನ್ ಸೀಟು ಹಂಚಿಕೆ ಬಗ್ಗೆ ಪ್ರಸ್ತಾಪಿಸಿದ್ದರು. ಆದರೆ ಯಾವ ಪಕ್ಷಕ್ಕೆ ಎಷ್ಟು ಸ್ಥಾನಗಳನ್ನು ಬಿಟ್ಟುಕೊಡಬೇಕು ಎನ್ನುವುದರ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳುವುದಕ್ಕೆ ಆಗಿರಲಿಲ್ಲ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here