ಬಿ.ಬಿ.ಎಂ.ಪಿ. ಸಾರ್ವತ್ರಿಕ ಚುನಾವಣೆ: ನಿಗದಿತ ಅವಧಿಯೊಳಗೆ ಮತದಾರರ ಪಟ್ಟಿಯನ್ನು ಸಿದ್ಧಪಡಿಸಲು ಸೂಚನೆ

0

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸಾರ್ವತ್ರಿಕ ಚುನಾವಣೆ ನಡೆಸುವ ಸಂಬಂಧ ಮತದಾರರ ಪಟ್ಟಿ ತಯಾರಿಕೆ ಹಾಗೂ ಇತರೆ ಪೂರ್ವ ಸಿದ್ಧತೆಗಳ ಬಗ್ಗೆ ಚರ್ಚಿಸುವ ಸಲುವಾಗಿ ಆಯುಕ್ತರು, ರಾಜ್ಯ ಚುನಾವಣಾ ಆಯೋಗ ಅವರ ಅಧ್ಯಕ್ಷತೆಯಲ್ಲಿ ಇಂದು ಆಯೋಗದಲ್ಲಿ ಸಭೆ ನಡೆಸಲಾಯಿತು.ಸದರಿ ಸಭೆಯಲ್ಲಿ ಬಿ.ಬಿ.ಎಂ.ಪಿ.ಯ ಆಯುಕ್ತರು, ರಾಜ್ಯ ಚುನಾವಣಾ ಆಯೋಗದ ಕಾರ್ಯದರ್ಶಿಗಳು ಹಾಗೂ ಮತದಾರರ ಪಟ್ಟಿ ಸಿದ್ದತೆಗಾಗಿ ಆಯೋಗದಿಂದ ನೇಮಕಗೊಂಡಂತಹ ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿಗಳು, ಬೆಂಗಳೂರು ನಗರ ಜಿಲ್ಲೆ, ವಿಶೇಷ ಆಯುಕ್ತರು(ಆಡಳಿತ), ಬಿ.ಬಿ.ಎಂಪಿ. ಜಂಟಿ ಆಯುಕ್ತರು(ದಕ್ಷಿಣ), ಜಂಟಿ ಆಯುಕ್ತರು (ಮಹದೇವಪುರ), ಜಂಟಿ ಆಯುಕ್ತರು ರಾಜರಾಜೇಶ್ವರಿನಗರ, ಜಂಟಿ ಆಯುಕ್ತರು, ಬೊಮ್ಮನಹಳ್ಳಿ ಸಹಾಯಕ ಆಯುಕ್ತರು(ಚುನಾವಣೆ) ಬಿ.ಬಿ.ಎಂ.ಪಿ. ಇವರುಗಳು ಹಾಜರಾಗಿದ್ದರು.

ಚಾಲ್ತಿಯಲ್ಲಿರುವ ಕರ್ನಾಟಕ ವಿಧಾನ ಸಭಾ ಮತದಾರರ ಪಟ್ಟಿಯನ್ನು ಅಳವಡಿಸಿಕೊಂಡು ಸರ್ಕಾರವು 23-6-2020 ರಂದು ಹೊರಡಿಸಿರುವ ಬಿ.ಬಿ.ಎಂ.ಪಿ.ಯ ವಾರ್ಡುಗಳ ಪುನರ್ ವಿಂಗಡಣೆಯ ಅಂತಿಮ ಅಧಿಸೂಚನೆ ಅನುಸಾರವಾಗಿ ವಾರ್ಡುವಾರು ಮತದಾರರ ಪಟಿಯನ್ನು ಸಿದ್ಧಪಡಿಸುವ ಬಗ್ಗೆ ಆಯೋಗದಿಂದ ಆಗಸ್ಟ್ 12 ರಂತೆ ಸೂಚನೆಗಳನ್ನು ನೀಡಲಾಗಿದೆ.

ವಾರ್ಡುಗಳ ಪುನರ್ ವಿಂಗಡಣೆಯ ಅನುಗುಣವಾಗಿ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವ ಬಗ್ಗೆ ಸಭೆಯಲ್ಲಿ ವಿಸ್ತ್ರøತವಾಗಿ ಚರ್ಚಿಸಲಾಯಿತು. ಆಯೋಗದ ಸೂಚನೆಯಂತೆ ವಾರ್ಡುವಾರು ಮತದಾರರ ಪಟ್ಟಿ ಸಿದ್ಧತೆಗಾಗಿ ಮತದಾರರ ನೋಂದಣಾಧಿಕಾರಿ ಮತ್ತು ಸಹಾಯಕ ಮತದಾರರ ನೋಂದಣಾಧಿಕಾರಿಗಳನ್ನು ಒಳಗೊಂಡಂತೆ ಇತರೆ ಅಧಿಕಾರಿ / ಸಿಬ್ಬಂದಿಗಳಿಗೆ ಆಗಸ್ಟ್ 21 ರಂದು ತರಬೇತಿಯನ್ನು ನೀಡಲಾಗಿದೆ ಎಂದು ಬಿ.ಬಿ.ಎಂ.ಪಿ. ಆಯುಕ್ತರು ತಿಳಿಸಿದರು.

ವಾರ್ಡು ಪುನರ್ ವಿಂಗಡಣೆಯಂತೆ ಪ್ರತಿಯೊಂದು ವಾರ್ಡಿನ ಗಡಿ ಸರಹದ್ದಿನಲ್ಲಿರುವ ಮತದಾರರನ್ನು ಗುರುತಿಸಿ ಯಾವುದೇ ಮತದಾರರ ಹೆಸರುಗಳು ಒಂದಕ್ಕಿಂತ ಹೆಚ್ಚು ವಾರ್ಡಿನ ಮತದಾರರ ಪಟ್ಟಿಯಲ್ಲಿ ಪುನರಾವರ್ತನೆಯಾಗದಂತೆ ಹಾಗೂ ಆಯಾ ವಾರ್ಡಿನ ಮತದಾರರು ಆಯಾ ವಾರ್ಡಿನಲ್ಲೇ ಇರುವಂತೆ ಯಾವುದೇ ಲೋಪದೋಷಗಳಿಗೆ ಅವಕಾಶ ನೀಡದಂತೆ ಹಾಗೂ ಆಯೋಗವು ನಿಗದಿಪಡಿಸಿದ ವೇಳಾಪಟ್ಟಿಯಂತೆ ನಿಗದಿತ ಅವಧಿಯೊಳಗೆ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವಂತೆ ಆಯೋಗದ ಆಯುಕ್ತರು ಜಿಲ್ಲಾ ಚುನಾವಣಾಧಿಕಾರಿಗಳಿಗೆ ಸೂಚಿಸಿದರು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here