ಶಿರಾ, ಆರ್. ಆರ್. ನಗರ ಉಪ ಚುನಾವಣೆ; ಕಾಂಗ್ರೆಸ್ ಅಭ್ಯರ್ಥಿ ಘೋಷಣೆ

0

ಆರ್. ಆರ್. ನಗರ ಉಪ ಚುನಾವಣೆಗೆ ಕಾಂಗ್ರೆಸ್ ಪಕ್ಷ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ನವೆಂಬರ್ 3ರಂದು ಚುನಾವಣೆ ನಡೆಯಲಿದ್ದು, 10ರಂದು ಫಲಿತಾಂಶ ಪ್ರಕಟವಾಗಲಿದೆ.

ಬುಧವಾರ ಎಐಸಿಸಿ ಅಧಿಕೃತವಾಗಿ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಶಿರಾ ಕ್ಷೇತ್ರದಿಂದ ಮಾಜಿ ಸಚಿವ ಟಿ. ಬಿ. ಜಯಚಂದ್ರ ಅಭ್ಯರ್ಥಿ. ಆರ್. ಆರ್. ನಗರ ಕ್ಷೇತ್ರದಿಂದ ಐಎಎಸ್ ಅಧಿಕಾರಿಯಾಗಿದ್ದ ದಿ. ಡಿ. ಕೆ. ರವಿ ಪತ್ನಿ ಹೆಚ್. ಕುಸುಮಾ ಅಭ್ಯರ್ಥಿ.

ಟಿ. ಬಿ. ಜಯಚಂದ್ರ ಉಪ ಚುನಾವಣೆ ಅಭ್ಯರ್ಥಿ ಎಂದು ಕಾಂಗ್ರೆಸ್ ಪಕ್ಷ ಬಹಳ ದಿನಗಳ ಹಿಂದೆ ಘೋಷಣೆ ಮಾಡಿತ್ತು. ಅಧಿಕೃತವಾಗಿ ಇಂದು ಎಐಸಿಸಿ ಆದೇಶವನ್ನು ಹೊರಡಿಸಿದೆ. 2018ರ ಚುನಾವಣೆಯಲ್ಲಿ ಶಿರಾದಲ್ಲಿ ಟಿ. ಬಿ. ಜಯಚಂದ್ರ ಸೋಲು ಕಂಡಿದ್ದರು.

ಹೆಚ್. ಕುಸುಮಾ ಭಾನುವಾರ ಕಾಂಗ್ರೆಸ್ ಪಕ್ಷ ಸೇರಿದ್ದರು. ಆಗಲೇ ಅವರು ಅಭ್ಯರ್ಥಿ ಎಂಬ ಸುದ್ದಿಗಳು ಹಬ್ಬಿತ್ತು. ಇಂದು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ. ಈ ಮೂಲಕ ಉಪ ಚುನಾವಣೆಗೆ ಕಾಂಗ್ರೆಸ್ ಎರಡೂ ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಣೆ ಮಾಡಿದೆ.

ಶಿರಾ ಕ್ಷೇತ್ರ : ಟಿ. ಬಿ. ಜಯಚಂದ್ರ 2013ರ ಚುನಾವಣೆಯಲ್ಲಿ ಶಿರಾ ಕ್ಷೇತ್ರದಲ್ಲಿ ಗೆಲುವು ಕಂಡಿದ್ದರು. ಸಿದ್ದರಾಮಯ್ಯ ಸಂಪುಟದಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾಗಿ ಕೆಲಸ ಮಾಡಿದ್ದರು.

2018ರ ಚುನಾವಣೆಯಲ್ಲಿ 63,973 ಮತಗಳನ್ನು ಪಡೆದು ಜೆಡಿಎಸ್‌ನ ಬಿ. ಸತ್ಯನಾರಾಯಣ ವಿರುದ್ಧ ಸೋಲು ಕಂಡಿದ್ದರು. ಬಿ. ಸತ್ಯನಾರಾಯಣ ಅವರ ನಿಧನದಿಂದಾಗಿ ಉಪ ಚುನಾವಣೆ ಎದುರಾಗಿದೆ. ಈ ಬಾರಿ ಜೆಡಿಎಸ್‌ನಿಂದ ಸತ್ಯನಾರಾಯಣ ಅವರ ಪತ್ನಿ ಅಮ್ಮಾಜಮ್ಮ ಅವರು ಅಭ್ಯರ್ಥಿ, ಬಿಜೆಪಿ ಇನ್ನೂ ಅಭ್ಯರ್ಥಿ ಘೋಷಣೆ ಮಾಡಬೇಕಿದೆ.

ಆರ್. ಆರ್. ನಗರ ಕ್ಷೇತ್ರ : ಬೆಂಗಳೂರಿನ ಆರ್. ಆರ್. ನಗರ ಕ್ಷೇತ್ರಕ್ಕೆ ಹೆಚ್. ಕುಸುಮಾ ಅಭ್ಯರ್ಥಿ. ಇದು ಅವರ ಮೊದಲ ಚುನಾವಣೆಯಾಗಿದೆ. ಭಾನುವಾರ ಕಾಂಗ್ರೆಸ್ ಸೇರಿದ್ದ ಕುಸುಮಾ ಅವರು ಉಪ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

2013, 2018ರಲ್ಲಿ ಆರ್. ಆರ್. ನಗರ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಮುನಿರತ್ನ ಗೆಲುವು ಸಾಧಿಸಿದ್ದರು. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಅವರು ಬಿಜೆಪಿ ಸೇರಿದ್ದು, ಉಪ ಚುನಾವಣೆ ಎದುರಾಗಿದೆ. ಬಿಜೆಪಿ ಮತ್ತು ಜೆಡಿಎಸ್ ಇನ್ನೂ ಆರ್. ಆರ್. ನಗರ ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಣೆ ಮಾಡಬೇಕಿದೆ.

ಅಕ್ಟೋಬರ್ 9ರಂದು ಚುನಾವಣಾ ಅಧಿಸೂಚನೆ ಪ್ರಕಟವಾಗಲಿದೆ. ಅಕ್ಟೋಬರ್ 16ರ ತನಕ ನಾಮಪತ್ರಗಳನ್ನು ಸಲ್ಲಿಕೆ ಮಾಡಲು ಅವಕಾಶವಿದೆ. ನವೆಂಬರ್ 3ರಂದು ಚುನಾವಣೆ ನಡೆಯಲಿದ್ದು, ನವೆಂಬರ್ 10ರಂದು ಮತ ಎಣಿಕೆ ನಡೆಯಲಿದೆ.

LEAVE A REPLY

Please enter your comment!
Please enter your name here