ಶುಕ್ರನತ್ತ ಇಸ್ರೋ ಚಿತ್ತ..!

0

ಅಂತರಿಕ್ಷ ಸಂಶೋಧನೆ ಮತ್ತು ಉಪಗ್ರಹಗಳ ಉಡಾವಣೆಯಲ್ಲಿ ಹೊಸ ಹೊಸ ಸಾಧನೆಗಳನ್ನು ಮಾಡಿರುವ ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಈಗ ಮತ್ತೊಂದು ಮಹತ್ವದ ಮೈಲಿಗಲ್ಲು ಸ್ಥಾಪನೆಗೆ ಸಜ್ಜಾಗಿದೆ.

ಸೌರ ಮಂಡಲದ ಅತ್ಯಂತ ಪ್ರಕಾಶಮಾನ ಶುಕ್ರನತ್ತ ಇಸ್ರೋ ಚಿತ್ತ ನೆಟ್ಟಿದೆ. ಫ್ರಾನ್ಸ್‍ನ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಸಿಎನ್‍ಇಎಸ್ ಸಹಭಾಗಿತ್ವದೊಂದಿಗೆ 2025ಕ್ಕೆ ವೀನಸ್ ಮಿಷನ್ (ಶುಕ್ರ ಗ್ರಹ ಯಾನ)ಕ್ಕೆ ಈಗಿನಿಂದಲೇ ಸಿದ್ಧತೆಗಳು ನಡೆಯುತ್ತಿವೆ.

ಈ ಸಂಬಂಧ ಇಸ್ರೋ ಅಧ್ಯಕ್ಷ ಕೆ.ಶಿವನ್ ಮತ್ತು ಫ್ರಾನ್ಸ್‍ನ ರಾಷ್ಟ್ರೀಯ ವೈಜ್ಞಾನಿಕ ಸಂಶೋಧನಾ ಕೇಂದ್ರದ ಮುಖ್ಯಸ್ಥ ಜೀನ್ ಎವಿಸ್ ಗಲ್ ಅವರು ಈಗಾಗಲೇ ಪೂರ್ವಭಾವಿ ಮಾತುಕತೆಗಳನ್ನು ನಡೆಸುತ್ತಿದ್ದಾರೆ.

ಅತ್ಯಂತ ಉಜ್ವಲ ಶುಕ್ರ ಗ್ರಹದಲ್ಲಿ ಯಾನ ಕೈಗೊಳ್ಳಲು ಬೇಕಾಗುವ ಅತ್ಯಾಧುನಿಕ ಉಪಕರಣಗಳನ್ನು ಪೂರೈಸುವ ಹೊಣೆಯನ್ನು ರಷ್ಯಾದ ಪ್ರಮುಖ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ರೋಸ್ ಕಾಸ್ಮಿಕ್‍ಗೆ ವಹಿಸಲು ನಿರ್ಧರಿಸಲಾಗಿದೆ.

ಶುಕ್ರ ಗ್ರಹದಲ್ಲಿ ಅನ್ಯ ಗ್ರಹ ಜೀವಿಗಳು ಇರುವ ಸಾಧ್ಯತೆ ಬಗ್ಗೆ ಇತ್ತೀಚೆಗೆ ವರದಿಯೊಂದು ಬೆಳಕು ಚೆಲ್ಲಿರುವ ಹಿನ್ನೆಲೆಯಲ್ಲಿ ಭಾರತ-ಫ್ರಾನ್ಸ್ ಸಹಭಾಗಿತ್ವದ ಶುಕ್ರ ಯಾನ ಯೋಜನೆ ಭಾರೀ ಪ್ರಾಮುಖ್ಯತೆ ಪಡೆದುಕೊಂಡಿದೆ.

ಶುಕ್ರ ಗ್ರಹಕ್ಕೆ ಯಾನ ಕೈಗೊಳ್ಳುವ ಈ ಮಹತ್ವಾಕಾಂಕ್ಷಿ ಯೋಜನೆಗಾಗಿ ಭಾರತದೊಂದಿಗೆ ಕೈ ಜೋಡಿಸಲು ಕೆಲವು ಪ್ರಮುಖ ದೇಶಗಳು ಒಲವು ತೋರಿದ್ದವು. ಆದರೆ ವೀನಸ್ ಮಿಷನ್‍ಗೆ ಫ್ರಾನ್ಸ್ ಅತ್ಯಂತ ಸೂಕ್ತವೆಂದು ಪರಿಗಣಿಸಿರುವ ಇಸ್ರೋ ಸಿಎನ್‍ಇಎಸ್ ಸಂಸ್ಥೆಯನ್ನು ಈ ಉದ್ದೇಶಕ್ಕಾಗಿ ಆಯ್ಕೆ ಮಾಡಿಕೊಂಡಿದೆ.

LEAVE A REPLY

Please enter your comment!
Please enter your name here