ಸಂಸತ್ತು ಸೈನಿಕರೊಂದಿಗೆ ದೇಶವಿದೆ ಎಂಬ ಸಂದೇಶ ನೀಡಲಿದೆ: ಪ್ರಧಾನಿ ಭರವಸೆ

0

‘ನಮ್ಮ ಸೈನಿಕರೊಂದಿಗೆ ಇಡೀ ದೇಶ ನಿಲ್ಲಲಿದೆ ಎಂಬ ಒಗ್ಗಟ್ಟಿನ ಸಂದೇಶವನ್ನು ಸಂಸತ್ ಹಾಗೂ ಅದರ ಎಲ್ಲ ಸದಸ್ಯರೂ ನೀಡಲಿದ್ದಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ವ್ಯಕ್ತಪಡಿಸಿದರು.

ಸೋಮವಾರ ಸಂಸತ್ ಅಧಿವೇಶನಕ್ಕೂ ಮುನ್ನ ಸಾಂಪ್ರದಾಯಿಕ ಹೇಳಿಕೆ ನೀಡಿದ ಅವರು, ‘ನಮ್ಮ ಸೈನಿಕರು ಗಡಿಭಾಗದಲ್ಲಿ ಅಪಾರ ಶೌರ್ಯ, ಅಭಿಮಾನ ಹಾಗೂ ತಾಯ್ನಾಡಿನ ರಕ್ಷಣೆಯ ಕೆಚ್ಚೆದೆಯ ಗುರಿಯೊಂದಿಗೆ ದೃಢವಾಗಿ ನಿಂತಿದ್ದಾರೆ. ಕಷ್ಟಕರವಾದ ಎತ್ತರ ಪ್ರದೇಶಗಳಲ್ಲಿ ಅವರು ನಿಂತಿದ್ದಾರೆ. ಇನ್ನು ಕೆಲವು ದಿನಗಳಲ್ಲಿ ಅಲ್ಲಿ ಹಿಮ ಸುರಿಯುವ ವಾತಾವರಣ ಉಂಟಾಗಲಿದೆ. ಈ ವಿಚಾರವಾಗಿ ಸಂಸತ್, ನಮ್ಮ ಗಡಿಗಳನ್ನು ಕಾಯುತ್ತಿರುವ ಸೈನಿಕರಿಗೆ ಬೆನ್ನಿಗೆ ಬಲವಾಗಿ ನಿಲ್ಲುವಂತಹ ಒಂದೇ ದ್ವನಿಯ ಕಠಿಣವಾದ ಸಂದೇಶ ನೀಡಲಿದೆ ಎಂದು ನಾವು ವಿಶ್ವಾಸ ವ್ಯಕ್ತಪಡಿಸುತ್ತೇವೆ’ ಎಂದು ಹೇಳಿದರು.

ಕೊರೊನಾ ವೈರಸ್ ಕುರಿತು ಪ್ರಸ್ತಾಪಿಸಿದ ಪ್ರಧಾನಿ, ‘ಲಸಿಕೆ ಸಿಗುವವರೆಗೂ ನಮ್ಮ ರಕ್ಷಣೆಯನ್ನು ನಾವು ಮರೆಯುವಂತಿಲ್ಲ. ವೈರಸ್ ಕುರಿತಾದ ನಿಯಮಗಳನ್ನು ಪಾಲಿಸಲೇಬೇಕು. ಈ ಸಂಸತ್ ಅಧಿವೇಶನ ವಿಶೇಷ ಸಂದರ್ಭಗಳ ಅಡಿ ನಡೆಯುತ್ತಿದೆ. ಇಲ್ಲಿ ಕೊರೊನಾ ಇದೆ ಮತ್ತು ಕರ್ತವ್ಯ ಕೂಡ ಇದೆ. ಕೋವಿಡ್ ಸಮಯದಲ್ಲಿ ತಮ್ಮ ಕರ್ತವ್ಯವನ್ನು ಮಾಡುವ ಹಾದಿಯನ್ನು ಸಂಸದರು ಆಯ್ದುಕೊಂಡಿದ್ದಾರೆ’ ಎಂದರು.

ಪ್ರಧಾನಿ ಹೇಳಿಕೆಗೆ ಕಾಂಗ್ರೆಸ್ ನಾಯಕರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ‘ಪ್ರಧಾನಿ ಹೇಳುತ್ತಾರೆ; ನಮ್ಮ ಸೈನಿಕರ ಹಿಂದೆ ಇಡೀ ದೇಶ ನಿಂತಿದೆ ಎಂಬ ಸಂದೇಶವನ್ನು ಸಂಸತ್ತು ಒಗ್ಗಟ್ಟಿನಿಂದ ಕಳುಹಿಸಲಿದೆ ಎಂಬ ಭರವಸೆ ಇದೆ ಎಂದು. ನಮ್ಮ ಸೈನಿಕರ ಹಿಂದೆ ನಮ್ಮ ದೇಶದ ಪ್ರತಿಯೊಬ್ಬ ನಾಗರಿಕನೂ ಇರುತ್ತಾನೆ. ಅವರನ್ನು ವಂದಿಸುತ್ತೇವೆ. ಆದರೆ ಪ್ರಧಾನಿಯ ನೀತಿಗಳು ಮತ್ತು ಕ್ರಿಯೆಗಳ ಹಿಂದೆ? ನನಗೆ ಅನುಮಾನವಿದೆ’ ಎಂದು ಕಪಿಲ್ ಸಿಬಲ್ ಟ್ವೀಟ್ ಮಾಡಿದ್ದಾರೆ. (ಏಜೆನ್ಸೀಸ್​)

LEAVE A REPLY

Please enter your comment!
Please enter your name here