ಸಹಕಾರಿ ಬ್ಯಾಂಕ್ ಖಾಸಗೀಕರಣದಿಂದ ‘ಅಕ್ರಮ’ ತಡೆ ಅಸಾಧ್ಯ: ಶರದ್ ಪವಾರ್

0

ಸಹಕಾರಿ ಬ್ಯಾಂಕ್‌ಗಳನ್ನು ರಕ್ಷಿಸುವ ಜತೆಗೆ, ಅವುಗಳ ‘ಸಹಕಾರ ಗುಣ’ವನ್ನು ಕಾಪಾಡಲಾಗುತ್ತದೆ ಎಂಬ ಪ್ರಧಾನಿ ನರೇಂದ್ರ ಮೋದಿಯವರ ನಡೆಯನ್ನು ಸ್ವಾಗತಿಸಿರುವ ಎನ್‌ಸಿಪಿ ನಾಯಕ ಶರದ್‌ಪವಾರ್, ‘ಸಹಕಾರಿ ಬ್ಯಾಂಕ್‌ಗಳನ್ನು ಖಾಸಗಿಕರಣಗೊಳಿಸುವುದರಿಂದ ಅಕ್ರಮ ಹಾಗೂ ವಂಚನೆಯನ್ನು ತಡೆಯಲು ಸಾಧ್ಯವಿಲ್ಲ’ ಎಂದು ಪ್ರತಿಪಾದಿಸಿದ್ದಾರೆ.

ಸ್ವಾತಂತ್ರ್ಯೋತ್ಸವದ ತಮ್ಮ ಭಾಷಣದಲ್ಲಿ ಮೋದಿ ಅವರು,’ಸಹಕಾರಿ ಬ್ಯಾಂಕುಗಳನ್ನು ಆರ್‌ಬಿಐ ವ್ಯಾಪ್ತಿಯಲ್ಲಿ ತಂದು, ಮಧ್ಯಮ ವರ್ಗದ ಕುಟುಂಬಗಳ ಹಣಕ್ಕೆ ಸುರಕ್ಷತೆ ಒದಗಿಸಲಾಗುತ್ತದೆ’ ಎಂಬ ಮಾತಿಗೆ ಪ್ರಶಂಸೆ ವ್ಯಕ್ತಪಡಿಸುವ ಪವಾರ್, ಈ ಕುರಿತು ಪ್ರಧಾನಿಯವರಿಗೆ ವಿವರವಾಗಿ ಪತ್ರ ಬರೆದಿದ್ದಾರೆ.

‘ಸಹಕಾರಿ ಬ್ಯಾಂಕ್‌ಗಳ ರಕ್ಷಣೆ ಕುರಿತು ನೀವು ಹೇಳಿರುವ ಎಲ್ಲವೂ ಪರಿಪೂರ್ಣವಾಗಬೇಕಾದರೆ ಮೊದಲು ಸಹಕಾರಿ ಬ್ಯಾಂಕ್‌ಗಳಲ್ಲಿ ಅಗತ್ಯವಾಗಿ ಹಣಕಾಸು ಶಿಸ್ತನ್ನು ರೂಢಿಸಬೇಕು. ಸಹಕಾರಿ ಬ್ಯಾಂಕ್‌ಗಳಲ್ಲಿರುವ ‘ಸಹಕಾರ ಗುಣ’ವನ್ನು ಸಂರಕ್ಷಿಸಬೇಕಿದೆ’ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

‘ಸಹಕಾರಿ ಬ್ಯಾಂಕಿಂಗ್ ಕ್ಷೇತ್ರ ದೇಶದ ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬು. ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ, ಮೊದಲ ಪಂಚವಾರ್ಷಿಕ ಯೋಜನೆಯಿಂದ ಹಿಡಿದು ದೇಶದ ಪ್ರತಿ ಹಣಕಾಸು ಯೋಜನೆಯಲ್ಲಿ, ಪ್ರತಿ ಗ್ರಾಮ ಪಂಚಾಯ್ತಿಯಲ್ಲಿ ನೀತಿ ರೂಪಿಸಲು, ಭಾರತದ ಪ್ರತಿ ಹಳ್ಳಿಯಲ್ಲಿರುವ ಶಾಲೆ ಮತ್ತು ಸಹಕಾರಿ ಸಂಘವನ್ನು ಸ್ಥಾಪಿಸಲು ಈ ಸಹಕಾರ ತತ್ವವನ್ನೇ ಬಳಲಾಗುತ್ತಿದೆ’ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಸಹಕಾರಿ ಬ್ಯಾಂಕ್‌ಗಳು ಕೇಂದ್ರ ಸರ್ಕಾರದ ಜನ್‌ಧನ್ ಕಾರ್ಯಕ್ರಮವನ್ನು ಹಳ್ಳಿ ಹಳ್ಳಿಗೆ ತಲುಪಿಸುವ ಮೂಲಕ, ಗ್ರಾಮೀಣ ಪ್ರದೇಶದ ಜನರಲ್ಲಿ ಬ್ಯಾಂಕಿಂಗ್ ಸಾಕ್ಷರತೆ ಮೂಡಿಸಲು ಸಹಕಾರಿಯಾಗಿವೆ. ಅದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಅದು ಈಗಾಗಲೇ ಸ್ಪಷ್ಟವಾಗಿ ಹಳ್ಳಿಗಳಲ್ಲಿ ಕಾಣುತ್ತಿದೆ’ ಎಂದು ನೆನೆಪಿಸಿದ್ದಾರೆ.

‘ನೀವು ಹೇಳಿರುವಂತೆ ಬ್ಯಾಂಕ್‌ಗಳಲ್ಲಿ ಹಣಕಾಸಿನ ಶಿಸ್ತು ಇರಬೇಕೆಂಬುದನ್ನು ನಾನು ಒಪ್ಪುತ್ತೇನೆ. ಆದರೆ, ಸಹಕಾರಿ ಬ್ಯಾಂಕಿಂಗ್ ಕ್ಷೇತ್ರವನ್ನು ಖಾಸಗಿಕರಣಗೊಳಿಸುವ ಮೂಲಕ ಸಹಕಾರಿ ಕ್ಷೇತ್ರದಲ್ಲಿ ನಡೆಯುವ ಅಕ್ರಮ, ವಂಚನೆಯನ್ನು ಪೂರ್ಣ ಅಥವಾ ಭಾಗಶಃವಾಗಿ ತಪ್ಪಿಸುತ್ತೇವೆ ಎಂಬುದು ಸರಿಯಾದ ಕ್ರಮವಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

2019-20ರ ಹಣಕಾಸು ವರ್ಷದಲ್ಲಿ ನಡೆದ ₹4355 ಕೋಟಿ ಪಿಎಂಸಿ ಬ್ಯಾಂಕ್‌ ಹಗರಣದಲ್ಲಿ, ಮೊದಲ ಅರ್ಧವರ್ಷದಲ್ಲಿ ಅಂದಾಜು ₹95,700 ಕೋಟಿಯಷ್ಟು ಅವ್ಯವಹಾರ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಾಗಿದೆ. ಇದರ ಅರ್ಥ, ಸಹಕಾರಿ ಬ್ಯಾಂಕ್‌ಗಳಲ್ಲಷ್ಟೇ ಅಕ್ರಮ, ಹಗರಣ ನಡೆದಿಲ್ಲ ಎಂಬುದು ಅಷ್ಟೇ. ಹಾಗಾಗಿ ಸಹಕಾರಿ ಬ್ಯಾಂಕುಗಳ ಖಾಸಗೀಕರಣದಿಂದ ಬ್ಯಾಂಕಿಂಗ್ ವಂಚನೆಗಳನ್ನು ತಡೆಯಬಹುದು ಅಥವಾ ಕಡಿಮೆ ಮಾಡಬಹುದು ಎಂಬುದು ಸರಿಯಲ್ಲ’ ಎಂದು ಪತ್ರದಲ್ಲಿ ಪ್ರತಿಪಾದಿಸಿದ್ದಾರೆ.

LEAVE A REPLY

Please enter your comment!
Please enter your name here