ಹತ್ರಸ್ ಅತ್ಯಾಚಾರ ಪ್ರಕರಣ: ಸಿಬಿಐಗೆ ವರ್ಗಾಯಿಸಲು ಸುಪ್ರೀಂ ಕೋರ್ಟ್‌ ಮೊರೆ ಹೋದ ಎನ್ ಜಿಒ

0

ಹತ್ರಸ್ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸುವಂತೆ ಕೋರಿ ಎನ್‌ಜಿಒ ಸಿಟಿಜನ್ಸ್ ಫಾರ್ ಪೀಸ್ ಆಯಂಡ್ ಜಸ್ಟೀಸ್ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿದೆ.

ಹತ್ರಸ್ ಘಟನೆಯ ಕುರಿತು ಬಾಕಿಯಿರುವ ಅರ್ಜಿಯಲ್ಲಿ ಮಧ್ಯಪ್ರವೇಶ ಮಾಡಲು ಮತ್ತು ಸರ್ವೋಚ್ಚ ನ್ಯಾಯಾಲಯಕ್ಕೆ ನೆರವಾಗಲು ಬಯಸಿರುವ ಎನ್‌ಜಿಒ,ಈ ಹಿಂದೆ ಬಲಿಷ್ಠ ಪ್ರಭುತ್ವಗಳಿಂದ ಬೆದರಿಕೆಗೊಳಗಾಗಿದ್ದ ಇಂತಹ ಘಟನೆಗಳ ಸಂತ್ರಸ್ತರೊಂದಿಗೆ ಕೆಲಸ ಮಾಡಿದ ಅನುಭವ ತನಗಿದೆ ಎಂದು ಹೇಳಿದೆ.

ಸಾಕ್ಷಿಗಳ ರಕ್ಷಣೆ,ಮೃತ ಯುವತಿಯ ಹಕ್ಕುಗಳು,ಸರಕಾರಿ ಅಧಿಕಾರಿಗಳ ಹೇಳಿಕೆಗಳು,ಯುವತಿಯ ಮರಣ ಹೇಳಿಕೆ,ಅತ್ಯಾಚಾರ ಪ್ರಕರಣಗಳಲ್ಲಿ ವಿಧಿವಿಜ್ಞಾನ ವರದಿಗಳು ಮತ್ತು ಇತರ ವೈದ್ಯಕೀಯ ಸಾಕ್ಷ್ಯಗಳ ಸುಸಂಗತೆ ಇತ್ಯಾದಿ ವಿಷಯಗಳನ್ನು ಎನ್‌ಜಿಒ ತನ್ನ ಅರ್ಜಿಯಲ್ಲಿ ಪ್ರಸ್ತಾಪಿಸಿದೆ.

ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಚುನಾಯಿತ ಜನಪ್ರತಿನಿಧಿಗಳು ಪ್ರಕರಣವನ್ನು ಉಪೇಕ್ಷಿಸಲು ಮತ್ತು ನ್ಯಾಯಾಲಯದಲ್ಲಿ ವಿಚಾರಣೆಗೆ ಮುನ್ನವೇ ತೀರ್ಪು ನೀಡಲು ಪ್ರಯತ್ನಿಸುತ್ತಿದ್ದಾರೆ ಎಂಬ ಮಾಧ್ಯಮ ವರದಿಗಳ ಹಿನ್ನೆಲೆಯಲ್ಲಿ ತಾನು ಅರ್ಜಿಯಲ್ಲಿ ಮಧ್ಯಪ್ರವೇಶಕ್ಕೆ ಬಯಸಿರುವುದಾಗಿ ಎನ್‌ಜಿಒ ತಿಳಿಸಿದೆ.

ಉತ್ತರ ಪ್ರದೇಶ ಸರಕಾರವು ಸಹ ಇತ್ತೀಚಿಗಷ್ಟೇ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಪ್ರಕರಣದಲ್ಲಿ ಸಿಬಿಐ ತನಿಖೆಗೆ ಆದೇಶಿಸುವಂತೆ ಸರ್ವೋಚ್ಚ ನ್ಯಾಯಾಲಯವನ್ನು ಆಗ್ರಹಿಸಿದೆ.

ತನಿಖೆ ಇನ್ನೂ ಪ್ರಗತಿಯಲ್ಲಿರುವಾಗ ಮತ್ತು ವಿಚಾರಣೆ ಪೂರ್ಣಗೊಂಡ ಬಳಿಕವಷ್ಟೇ ತೀರ್ಪು ಹೊರಬರಬೇಕಿರುವಾಗ ಹಿರಿಯ ಪೊಲೀಸ್ ಅಧಿಕಾರಿಯೋರ್ವರು ಮೃತ ದಲಿತ ಯುವತಿಯ ಮೇಲೆ ಅತ್ಯಾಚಾರ ನಡೆದಿರಲಿಲ್ಲ ಎಂದು ಹೇಳಿದ್ದನ್ನು ಎನ್‌ಜಿಒ ಬಲವಾಗಿ ಆಕ್ಷೇಪಿಸಿದೆ.

ಆರೋಪಿಗಳೊಂದಿಗೆ ಗುರುತಿಸಿಕೊಂಡಿರುವ ಸಾಮಾಜಿಕವಾಗಿ ಬಲಿಷ್ಠ ಕುಟುಂಬಗಳು ಸಂತ್ರಸ್ತ ಯುವತಿಯ ಕುಟುಂಬವನ್ನು ಬೆದರಿಸುತ್ತಿರುವಂತೆ ಮಾಧ್ಯಮ ವರದಿಗಳಿಂದ ಕಂಡು ಬರುತ್ತಿದೆ. ಹೀಗಾಗಿ ಸಂತ್ರಸ್ತ ಕುಟುಂಬಕ್ಕೆ ರಕ್ಷಣೆಯ ಕುರಿತು ಅಸ್ಪಷ್ಟತೆಯು ದಿನೇ ದಿನೇ ಹೆಚ್ಚುತ್ತಿದೆ. ಸಾಕ್ಷಿಗಳ ರಕ್ಷಣೆಯೂ ಪ್ರಕರಣದಲ್ಲಿ ಅತ್ಯಂತ ಮಹತ್ವದ ವಿಷಯವಾಗಿದೆ ಎಂದು ಅದು ಹೇಳಿದೆ.

ಇತರರೊಂದಿಗೆ ಸಂತ್ರಸ್ತ ಕುಟುಂಬವನ್ನೂ ಮಂಪರು ಪರೀಕ್ಷೆಗೆ ಒಳಪಡಿಸಲಾಗುವುದು ಎಂಬ ಉತ್ತರ ಪ್ರದೇಶ ಸರಕಾರದ ವಕ್ತಾರರ ಹೇಳಿಕೆಗೆ ಆಕ್ಷೇಪವನ್ನು ವ್ಯಕ್ತಪಡಿಸಿರುವ ಎನ್‌ಜಿಒ,ಕುಟುಂಬ ಸದಸ್ಯರು ಆರೋಪಿಗಳೂ ಅಲ್ಲ,ಅವರ ವಿರುದ್ಧ ಯಾವುದೇ ಪ್ರಕರಣಗಳೂ ಇಲ್ಲ. ಹೀಗಿರುವಾಗ ಅವರನ್ನು ಇಂತಹ ಪರೀಕ್ಷೆಗಳಿಗೆ ಒಳಪಡಿಸುವುದು ಕಾನೂನಿನ ಉಲ್ಲಂಘನೆಯಾಗುತ್ತದೆ ಎಂದು ವಾದಿಸಿದೆ.

ತನಿಖೆಯ ಪ್ರಗತಿ ವರದಿಯನ್ನು ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಬೇಕೆಂಬ ನಿರ್ದಿಷ್ಟ ನಿರ್ದೇಶದೊಂದಿಗೆ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಬೇಕು ಎಂದು ಅರ್ಜಿಯಲ್ಲಿ ಆಗ್ರಹಿಸಲಾಗಿದೆ.

LEAVE A REPLY

Please enter your comment!
Please enter your name here