2 ತಲೆ ರಸ್ಸೆಲ್​ ವೈಪರ್ ಭಾರತದಲ್ಲಿ ಪತ್ತೆ​: ಒಂದೇ ಕುಟುಕಿಗೆ ಪ್ರಾಣ ತೆಗೆಯುವ ವಿಶ್ವದ ಅಪಾಯಕಾರಿ ಹಾವು!

0

ಮಹಾರಾಷ್ಟ್ರದ ಕಲ್ಯಾಣ್​ ಜಿಲ್ಲೆಯ ಗ್ರಾಮವೊಂದರ ಮನೆಯ ಹೊರಗೆ ಆಗಸ್ಟ್​ 7ರಂದು ಪತ್ತೆಯಾದ 11 ಸೆಂಟಿ ಮೀಟರ್ ಉದ್ದದ ಜೀವಿಯನ್ನು ನೋಡಿ ಸ್ಥಳೀಯರ ಅವಕ್ಕಾದ ಪ್ರಸಂಗ ಜರುಗಿದೆ.

ಅಂದಹಾಗೆ ಅಂದು ಕಾಣಿಸಿಕೊಂಡು ಜೀವಿ ರಸ್ಸೆಲ್​ ವೈಪರ್​ (ಮಂಡಲ ಹಾವು). ಇದು ಜಗತ್ತಿನಲ್ಲೇ ತುಂಬಾ ವಿಷಕಾರಿ ಹಾವುಗಳಲ್ಲಿ ಒಂದು. ವಿಶೇಷವೆಂದರೆ ಪತ್ತೆಯಾದ ಹಾವಿಗೆ ಎರಡು ತಲೆ ಇರುವುದನ್ನು ನೋಡಿ ಎಲ್ಲರೂ ಅಚ್ಚರಿಗೊಂಡಿದ್ದಾರೆ. ಉರಗತಜ್ಞ ಪ್ರೇಮ್​ ಅಹೆರ್​ ಎಂಬುವರು ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಬಂದು ಹಾವನ್ನು ಹಿಡಿದರು.

ಈ ಬಗ್ಗೆ ಮಾತನಾಡಿರುವ ಅಧಿಕಾರಿಗಳ ತಂಡ ಹಾವನ್ನು ಹೆಚ್ಚಿನ ಸಂಶೋಧನೆಗೆ ತೆಗೆದುಕೊಂಡು ಹೋಗಲಾಗಿದೆ. ಸದ್ಯ ಹಾವು ಜೀವಂತವಾಗಿದೆ ಮತ್ತು ಸುರಕ್ಷಿತ ಪರಿಸರದಲ್ಲಿದೆ. ಅರಣ್ಯ ಇಲಾಖೆಯ ಶಿಷ್ಟಾಚಾರ ಪ್ರಕಾರ ಸದ್ಯ ಹಾವು ಇರುವ ಸ್ಥಳದ ಬಗ್ಗೆ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದಿದ್ದಾರೆ.

ಇನ್ನು ಭಾರತೀಯ ಅರಣ್ಯಾಧಿಕಾರಿ ಸುಶಾಂತ್​ ನಂದಾ ಅವರು ಟ್ವೀಟ್​ ಮಾಡಿ, ಅನುವಂಶಿಕ ವೈಪರಿತ್ಯ ಹೊಂದಿರುವ ಇಂತಹ ಜೀವಿಗಳು ಬದುಕುಳಿಯುವ ಪ್ರಮಾಣ ಕಡಿಮೆ ಎಂದಿದ್ದಾರೆ. ಎರಡು ತಲೆಯ ರಸ್ಸೆಲ್​ ವೈಪರ್​​ ಅನ್ನು ಮಹಾರಾಷ್ಟ್ರದಲ್ಲಿ ಸೆರೆಹಿಡಿಯಲಾಗಿದೆ. ಪ್ರಪಂಚದಲ್ಲೇ ಇತರೆ ವಿಷಕಾರಿ ಹಾವುಗಳಿಗಿಂತ ಇದು ಹೆಚ್ಚು ಅಪಾಯಕಾರಿ. ಕೇವಲ ಒಂದು ಕಡಿತದಲ್ಲೇ ಪ್ರಾಣ ಹೋಗುವ ಸಾಧ್ಯತೆ ಹೆಚ್ಚೆಂದಿದ್ದಾರೆ.

ಹಾವಿನ ಎರಡು ತಲೆಯು ತಲಾ ಅಂದಾಜು 0.8 ಇಂಚು ಉದ್ದವಿದೆ. ರಸ್ಸೆಲ್​ ವೈಪರ್​ ಬೇಟೆಯಾಡುವಲ್ಲಿ ತನ್ನದೇ ವಿಶೇಷ ಪ್ರವೃತ್ತಿಯನ್ನು ಹೊಂದಿದೆ. ಇನ್ನು ಹೆಚ್ಚು ವಿಷಕಾರಿಯಾಗಿರುವ ರಸ್ಸೆಲ್​ ವೈಪರ್​ ಕಡಿತದಿಂದ ಏಷ್ಯಾದಲ್ಲಿ ವರ್ಷಕ್ಕೆ ಸಾವಿರಾರು ಮಂದಿ ಮರಣ ಹೊಂದುತ್ತಾರೆಂದು ಮಿಚಿಗನ್​ ಯೂನಿವರ್ಸಿಟಿ ಹೇಳಿದೆ.

ರಸ್ಸೆಲ್​ ವೈಪರ್​ನಿಂದ ಕಡಿತಕ್ಕೊಳಗಾದವರು ತುಂಬಾ ನೋವಿನಿಂದ ವಾಂತಿ, ತಲೆತಿರುಗುವಿಕೆ ಮತ್ತು ಮೂತ್ರಪಿಂಡ ವಿಫಲದಂತಹ ವ್ಯಾಪಕವಾದ ರೋಗ ಲಕ್ಷಣಗಳನ್ನು ಹೊಂದಿ ಮರಣ ಹೊಂದುತ್ತಾರೆ.  

LEAVE A REPLY

Please enter your comment!
Please enter your name here