2020-21ನೇ ಸಾಲಿಗೆ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಆರಂಭ : ದೋಷರಹಿತ ಮತದಾರರ ಚೀಟಿ ಸರಿಪಡಿಸಿಕೊಳ್ಳೋದು ಮರೆಯಬೇಡಿ

0

ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ 2020-21 ನೇ ಸಾಲಿಗಾಗಿ ಜಿಲ್ಲೆಯ ಮತದಾರ ಪಟ್ಟಿಯ ವಿಶೇಷ ಪರಿಷ್ಕರಣೆ ಆರಂಭವಾಗಿದ್ದು, ಹೊಸ ಮತದಾರರ ಸೇರ್ಪಡೆ, ತಿದ್ದುಪಡಿ, ಸ್ಥಳ ಬದಲಾವಣೆ ಸೇರಿದಂತೆ ವಿವಿಧ ಹಕ್ಕು, ಆಕ್ಷೇಪಣೆಗಳಿಗಾಗಿ ಅರ್ಹ ಮತದಾರರು ನಿಗದಿತ ಅರ್ಜಿ ನಮೂನೆಗಳನ್ನು ಸಲ್ಲಿಸಬಹುದು ಎಂದು ಜಿಲ್ಲಾ ಚುನಾವಣಾ ಅಧಿಕಾರಿಗಳು ಆಗಿರುವ ಜಿಲ್ಲಾದಿಕಾರಿ ನಿತೇಶ್ ಪಾಟೀಲ ಹೇಳಿದರು.

ಅವರು ಇಂದು ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ 2020-21 ನೇ ಸಾಲಿಗೆ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಕುರಿತು ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆ ಜರುಗಿಸಿ ಮಾತನಾಡಿದ ಅವರು, ಸಾರ್ವಜನಿಕರಿಂದ ಸ್ವೀಕೃತವಾಗುವ ಅರ್ಜಿ 6, 7, 8 ಮತ್ತು 8(ಎ) ನಮೂನೆಗಳನ್ನು ಪರಿಶೀಲಿಸಿ, ಪೂರಕ ಮತದಾರ ಪಟ್ಟಿಯ ಕರಡು ಪ್ರತಿಯನ್ನು ನವೆಂಬರ್ 16, 2020 ರಂದು ಪ್ರಕಟಿಸಲಾಗುತ್ತದೆ. ಕರಡು ಮತದಾರ ಪಟ್ಟಿಯಲ್ಲಿನ ವಿಷಯಗಳಿಗೆ ತಕರಾರು ಸಲ್ಲಿಸಲು ಡಿಸೆಂಬರ್ 15, 2020 ರ ವರೆಗೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ನವೆಂಬರ್ 16 ರಿಂದ ಡಿಸೆಂಬರ್ 15 ರೊಳಗಿನ ಎರಡು ಶನಿವಾರ ಮತ್ತು ಎರಡು ರವಿವಾರಗಳನ್ನು ಗುರುತಿಸಿ, ಮತದಾರ ಪಟ್ಟಿ ಪರಿಷ್ಕರಣೆ, ನೋಂದಣಿ ಅಭಿಯಾನವನ್ನು ಮುಖ್ಯ ಚುನಾವಣಾಧಿಕಾರಿಗಳ ಸೂಚನೆಯಂತೆ ಹಮ್ಮಿಕೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ಹೇಳಿದರು.

ಮತದಾರರಿಂದ ಬಂದ ಹೆಸರು ಸೇರ್ಪಡೆ, ಹೆಸರು, ವಿಳಾಸ ತಿದ್ದುಪಡಿ, ವರ್ಗಾವಣೆ, ಸೇರ್ಪಡೆಯಾದ ಹೆಸರು ರದ್ದುಗೊಳಿಸುವ ಕುರಿತು ಸ್ವೀಕರಿಸಿದ ಎಲ್ಲ ಅರ್ಜಿ ನಮೂನೆಗಳನ್ನು ಪರಿಶೀಲಿಸಿ, ತಕರಾರು ಅವಧಿಯನ್ನು ಜನವರಿ 5, 2021 ಮಂಗಳವಾರದಂದು ಮುಕ್ತಾಯಗೊಳಿಸಲಾಗುತ್ತದೆ. ಭಾರತ ಚುನಾವಣಾ ಆಯೋಗದ ಅನುಮತಿ ಮೇರೆಗೆ ಜನೆವರಿ 15,2021 ರ ಶುಕ್ರವಾರದಂದು ವಿಶೇಷ ಪರಿಷ್ಕರಣೆಗೆ ಒಳಪಟ್ಟ ಮತದಾರ ಯಾದಿಯ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಪ್ರಸ್ತುತದಲ್ಲಿ ಧಾರವಾಡ ಜಿಲ್ಲೆಯಲ್ಲಿ 7,73,041 ಜನ ಪುರುಷ, 7,59,732 ಜನ ಮಹಿಳಾ ಹಾಗೂ 105 ಜನ ತೃತೀಯಲಿಂಗಿ ಮತದಾರರು ಸೇರಿದಂತೆ ಒಟ್ಟು 15,32,878 ಜನ ಮತದಾರರಿದ್ದರೆ. ಇದರಲ್ಲಿ 1,923 ಸೇವಾ ಮತದಾರರು, 13,106 ವಿಶೇಷ ಚೇತನ ಮತದಾರರು ಸೇರ್ಪಡೆಗೊಂಡಿದ್ದಾರೆ. ವಿವಿಧ ತಾಲೂಕುಗಳು ಸೇರಿ ಜಿಲ್ಲೆಯಲ್ಲಿ ಒಟ್ಟು 1,634 ಮತಗಟ್ಟೆಗಳಿವೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಜಿಲ್ಲೆಯ ಎಲ್ಲ ವಿಧಾನಸಭಾ ಮತಕ್ಷೇತ್ರಗಳಿಗೆ ಸಂಬಂಧಿಸಿದಂತೆ ಭಾರತ ಚುನಾವಣಾ ಆಯೋಗದ ಆಗಸ್ಟ್ 7, 2020 ರ ನಿರ್ದೇಶನದಂತೆ ಮತದಾರ ಪಟ್ಟಿಗಳ ವಿಶೇಷ ಪರಿಷ್ಕರಣೆ ಕಾರ್ಯವನ್ನು ಹಮ್ಮಿಕೊಂಡು ಮತಗಟ್ಟೆ ಪ್ರದೇಶ, ಸಾರ್ವಜನಿಕ ಸ್ಥಳ, ನಗರ ಸ್ಥಳೀಯ ಕಚೇರಿ, ಗ್ರಾಮಸಭಾ ಕಚೇರಿ, ಮತದಾರರ ನೊಂದಣಿ ಅಧಿಕಾರಿಗಳು ಮತ್ತು ಸಹಾಯಕ ಮತದಾರರ ನೊಂದಣಿ ಅಧಿಕಾರಿಗಳ ಕಚೇರಿಗಳಲ್ಲಿ ಹಾಗೂ ಮುಖ್ಯ ಚುನಾವಣಾಧಿಕಾರಿಗಳ ವೆಬ್‍ಸೈಟ್ ನಲ್ಲಿ ಸಾರ್ವಜನಿಕರು ಅವಗಾಹನೆಗಾಗಿ ಪ್ರಕಟಿಸಲಾಗಿದ್ದು, ಸಾರ್ವಜನಿಕರು ತಮ್ಮ ಹೆಸರುಗಳು ಇರುವುದನ್ನು ಪರಿಶೀಲಿಸಿ, ಖಚಿತಪಡಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ನವೆಂಬರ್ 16 ರಿಂದ ಡಿಸೆಂಬರ್ 15,2020 ರ ವರೆಗೆ ಸಾರ್ವಜನಿಕರು ಮತದಾರರ ಪಟ್ಟಿಗೆ ತಮ್ಮ ಹೆಸರು ಸೇರ್ಪಡೆ ಹಾಗೂ ಇತರೆ ಹಕ್ಕು ಮತ್ತು ಆಕ್ಷೇಪಣಾ ಅರ್ಜಿಗಳನ್ನು ಮತಗಟ್ಟೆ ಅಧಿಕಾರಿ, ಮತದಾರರ ನೋಂದಣಿ ಅಧಿಕಾರಿ, ಸಹಾಯಕ ಮತದಾರರ ನೊಂದಣಿ ಅಧಿಕಾರಿಗಳು ಹಾಗೂ ಆನ್‍ಲೈನ್‍ನಲ್ಲಿ ಮೂಲಕವೂ ಅರ್ಜಿ ಸಲ್ಲಿಸಲು ಅವಕಾಶವಿದೆ. ಜನೇವರಿ 1, 2021 ಕ್ಕೆ 18 ವರ್ಷ ಪೂರ್ಣಗೊಳ್ಳುವ ಭಾರತದ ನಾಗರಿಕರು ಮತದಾರ ಪಟ್ಟಿಯಲ್ಲಿ ತಮ್ಮ ಹೆಸರು ಸೇರ್ಪಡೆ ಮಾಡಲು ಅರ್ಜಿ ನಮೂನೆ-6 ನ್ನು ಸಲ್ಲಿಸಬೇಕು. ಹೆಸರು ಕಡಿಮೆ ಮಾಡಲು ಅರ್ಜಿ ನಮೂನೆ-7, ಮತದಾರರ ಹೆಸರು, ಇತರೇ ತಿದ್ದುಪಡಿಗಾಗಿ ಅರ್ಜಿ ನಮೂನೆ-8 ಮತ್ತು ಮತದಾರರು ಒಂದೇ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಭಾಗದಿಂದ ಇನ್ನೊಂದು ವಿಭಾಗ, ಭಾಗ ಸಂಖ್ಯೆಗೆ ವರ್ಗಾವಣೆ ಮಾಡುವುದಿದ್ದಲ್ಲಿ ಅರ್ಜಿ ನಮೂನೆ- 8ಎ ರಲ್ಲಿ ಸಲ್ಲಿಸಬೇಕು.

ಚುನಾವಣಾ ಆಯೋಗದ ನಿರ್ದೇಶನದಂತೆ ಪ್ರತಿಯೊಂದು ರಾಜಕೀಯ ಪಕ್ಷಗಳು ಮತಗಟ್ಟೆ ಮಟ್ಟದಲ್ಲಿ ತಮ್ಮ ಏಜೆಂಟರನ್ನು ನೇಮಕ ಮಾಡಿ, ನಿಗದಿತ ನಮೂನೆಯಲ್ಲಿ ಮಾಹಿತಿ ಸಲ್ಲಿಸಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದರು.

ರಾಜಕೀಯ ಪಕ್ಷಗಳ ಮತಗಟ್ಟೆ ಮಟ್ಟದ ಏಜೆಂಟರ್‍ಗಳು ನವೆಂಬರ್ 16 ರಿಂದ ಡಿಸೆಂಬರ್ 15,2020 ರೊಳಗೆ ಹಮ್ಮಿಕೊಳ್ಳಲಿರುವ ವಿಶೇಷ ಅಭಿಯಾನದಂದು ಹಕ್ಕು, ಆಕ್ಷೇಪಣೆ ಅರ್ಜಿಗಳನ್ನು ಸ್ವೀಕರಿಸುವ ಮತಗಟ್ಟೆಗಳಲ್ಲಿ ಹಾಜರಿದ್ದು ಅರ್ಜಿ ಸಲ್ಲಿಸಬಹುದಾಗಿದೆ. ಆದರೆ ಏಜೆಂಟರುಗಳು ಅರ್ಜಿಗಳನ್ನು ಸಗಟಾಗಿ ನೀಡಲು ಅವಕಾಶವಿಲ್ಲ. ಪ್ರತಿಯೊಬ್ಬ ಮತಗಟ್ಟೆ ಎಜೆಂಟರು ಒಂದು ಸಲಕ್ಕೆ ಅಥವಾ ಒಂದು ದಿನಕ್ಕೆ 10 ಅರ್ಜಿಗಳನ್ನು ಮಾತ್ರ ಸಲ್ಲಿಸಬಹುದು. ಸದರಿ ವಿಶೇಷ ಪರಿಷ್ಕರಣೆ ಅವಧಿಯಲ್ಲಿ ಮತಗಟ್ಟೆ ಏಜೆಂಟ್ ಒಟ್ಟು 30 ಅರ್ಜಿಗಳನ್ನು ಮಾತ್ರ ಮತಗಟ್ಟೆ ಅಧಿಕಾರಿಗಳ ಮುಖಾಂತರ ಸಲ್ಲಿಸಲು ಅವಕಾಶವಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

LEAVE A REPLY

Please enter your comment!
Please enter your name here